ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ: ಆಸ್ಕರ್ ಫೆರ್ನಾಂಡಿಸ್

ಶಿರ್ವ, ಸೆ. 24: ರೋಗ ಬಂದಾಗ ಕ್ಲಪ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದ ರೊಂದಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ರವಿವಾರ ಶಿರ್ವ ಸಾವುದ್ ಸಭಾಭವನದಲ್ಲಿ ಆಯೋಜಿಸಲಾದ 12ನೆ ವರ್ಷದ ಮಣಿಪಾಲ ಆರೋಗ್ಯ ಕಾರ್ಡ್ ವಿತರಣೆ ಹಾಗೂ ಶಿರ್ವ ವಲಯ ಸಮಿತಿಯ ವಾರ್ಷಿಕ ಸಹಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಕಾರ್ಡ್ ವಿತರಿಸಿ ಮಾತನಾಡಿದ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ, ಸ್ವಚ್ಚ ಪರಿಸರ ಹಾಗೂ ಶುದ್ದ ನೀರಿನ ಬಳಕೆಯಿಂದ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯವಿದೆ. ಹೆಚ್ಚುತ್ತಿರುವ ಜನಸಂಖ್ಯೆ ಪರಿಣಾಮ ದೇಶದಲ್ಲೆಡೆ ಕೊಳಚೆ ನೀರಿನ ವಿಲೆವಾರಿ ಹಾಗೂ ಕಸದ ಸಮರ್ಪಕ ನಿರ್ವಹಣೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾಪು ಕ್ಷೇತ್ರದಲ್ಲಿ ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಎಲ್ಲೂರಿನಲ್ಲಿ 10 ಎಕರೆ ಜಾಗದಲ್ಲಿ ಸುಮಾರು 5 ಕೋಟಿ ಅನುದಾನದೊಂದಿಗೆ ಕಸದಿಂದ ಗೊಬ್ಬರ ತಯಾರಿಸುವ ಘಟಕವನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ ಕಾಪು ಕ್ಷೇತ್ರದಾದ್ಯಂತ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಗಿಡ ನೆಡುವುದರ ಮೂಲಕ ಸ್ವಚ್ಚ ಪರಿಸರ ನಿರ್ಮಾಣಕ್ಕೆ ಪಣತೊಡಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಧರ್ಮಪ್ರಾಂತ್ಯದ ಆರೋಗ್ಯ ಆಯೋಗದ ಸಂಚಾಲಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೇಸ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರತಿಯೊಂದು ಧರ್ಮಕೇಂದ್ರಗಳಲ್ಲಿ ರಕ್ತದ ಗುಂಪಿನ ವರ್ಗೀಕರಣ, ಮಾರಕ ರೋಗಗಳ ಕುರಿತು ಜನಜಾಗೃತಿ ಮೂಡಿಸುವ ಕೆಲಸ ಹೆಚ್ಚು ನಡೆಯಬೇಕಾಗಿದೆ ಎಂದು ಹೇಳಿದರು.
ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್‌ನ ಸಹಸಂಚಾಲಕಿ ವೆರೋನಿಕಾ ಕರ್ನೇಲಿಯೊ ಮಾತನಾಡಿ, ಕಳೆದ ಸಾಲಿನಲ್ಲಿ ಆರೋಗ್ಯ ಕಾರ್ಡ್ ಮೂಲಕ 1876 ಮಂದಿ 3.13 ಕೋಟಿ ರೂಗಳ ಆರೋಗ್ಯ ಚಿಕಿತ್ಸೆಯನ್ನು ಪಡೆದಿದ್ದು, 5 ಮಂದಿ ಅಕಾಲಿಕ ಮರಣಕ್ಕೆ ಸಂಬಂಧಿಸಿ ರೂ 2..5 ಲಕ್ಷ ವಿಮಾ ಹಣವನ್ನು ಪಡೆದಿದ್ದಾರೆ. ಈ ವರ್ಷ ಒಟ್ಟು 13143 ಕುಟುಂಬಗಳು ನೂತನ ಕಾರ್ಡ್‌ಗೆ ನೋಂದಾಯಿಸಿಕೊಂಡಿವೆ ಎಂದು ತಿಳಿಸಿದರು.
ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ತಾಪಂ ಸದಸ್ಯ ಮೈಕಲ್ ರಮೇಶ್ ಡಿಸೋಜ, ವೈಲೆಟ್ ಬರೆಟ್ಟೊ, ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ. ಎ.ಗಫೂರ್, ವಲಯಾಧ್ಯಕ್ಷೆ ಮರಿಯ, ಕೇಂದ್ರಿಯ ಸಮಿತಿಯ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ಶಿರ್ವ ಚರ್ಚಿನ ಧರ್ಮಗುರು ವಂ.ಸ್ಟ್ಯಾನಿ ತಾವ್ರೊ, ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ್ ವಂ. ಮಹೇಶ್ ಡಿಸೋಜ, ಶಿರ್ವ ಪಾಲನಾ ಸಮಿತಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜ, ಕಾರ್ಯದರ್ಶಿ ಲೀನಾ ಮಚಾದೊ, ಕೇಂದ್ರಿಯ ಕಾರ್ಯದರ್ಶಿ ಜೆಸಿಂತಾ ಕುಲಾಸೊ, ಕೋಶಾಧಿಕಾರಿ ಸೊಲೋಮನ್ ಅಲ್ವಾರಿಸ್, ಆಧ್ಯಾತ್ಮಿಕ ನಿರ್ದೇಶಕ ವಂ.ಫೆರ್ಡಿನಾಂಡ್ ಗೊನ್ಸಾಲ್ವಿಸ್, ವಲಯ ಕಾರ್ಯದರ್ಶಿ ಜೆರಾಲ್ಡ್ ರೊಡ್ರಿಗಸ್, ಕೋಶಾಧಿಕಾರಿ ಗ್ರೆಗೋರಿ ಡಿಸೋಜ, ಶಿರ್ವ ಘಟಕದ ಅಧ್ಯಕ್ಷ ಮೋಂತು ಮಿನೇಜಸ್, ಬ್ಲೊಸಮ್ ಫೆರ್ನಾಂಡಿಸ್, ಮೆಲ್ವಿನ್ ಆರಾನ್ಹಾ, ಮಾಜಿ ಕೇಂದ್ರಿಯ ಅಧ್ಯಕ್ಷ ಎಲ್‌ರೊಯ್ ಕಿರಣ್ ಕ್ರಾಸ್ತಾ, ಡಾ.ಜೆರಾಲ್ಡ್ ಪಿಂಟೊ, ವಿಲ್ಯಮ್ ಮಚಾದೊ ಮೊದಲಾದವರು ಉಪಸ್ಥಿತರಿದ್ದರು.







