ರಾಜ್ಯ ಸರಕಾರದ ವರ್ಚಸ್ಸು ಉಚ್ಛ್ರಾಯದಲ್ಲಿ: ವೀರಪ್ಪ ಮೊಯ್ಲಿ

ಉಡುಪಿ, ಸೆ.24: ಕಳೆದ ನಾಲ್ಕು ವರ್ಷಗಳ ತನ್ನ ಆಡಳಿತಾವಧಿಯಲ್ಲಿ ರಾಜ್ಯದ ಸಿದ್ಧರಾಮಯ್ಯ ಸರಕಾರ ಬಡವರ, ಹಿಂದುಳಿದವರ, ರೈತರ, ದಲಿತರ ಹಾಗೂ ಮಹಿಳೆಯರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುವ ಮೂಲಕ ಸರಕಾರದ ಮತ್ತು ಪಕ್ಷದ ವರ್ಚಸ್ಸು ಈಗ ಉಚ್ಛ್ರಾಯ ಸ್ಥಿತಿಯಲ್ಲಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ರವಿವಾರ ಮಿಷನ್ ಕಂಪೌಂಡ್‌ನ ಭಾಷಲ್ ಮಿಷನರೀಸ್ ಸ್ಮಾರಕ ಸಭಾಂಗಣದಲ್ಲಿಆಯೋಜಿಸಲಾದ ಉಡುಪಿ ವಿಧಾನಸಭಾ ಕ್ಷೇತ್ರದ ಬೂತ್ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡು ತಿದ್ದರು.
ಇಂದಿನ ದಿನಗಳಲ್ಲಿ 3-4 ವರ್ಷಗಳ ಆಡಳಿತದ ಬಳಿಕ ಆಡಳಿತ ವಿರೋಧಿ ಅಲೆ ಪ್ರತಿ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಸಾಮಾನ್ಯ ಬೆಳವಣಿಗೆಯಾಗಿದೆ. ಆದರೆ ಕರ್ನಾಟಕದಲ್ಲಿ ಇಂದು ಆಡಳಿತದ ಪರವಾದ ಅಲೆಯೇ ಎಲ್ಲೆಲ್ಲೂ ಕಂಡುಬರುತ್ತಿದೆ. ಇದಕ್ಕೆ ಸಿದ್ಧು ಸರಕಾರ ತನ್ನ ಜನಪರ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿರುವುದೇ ಕಾರಣ ಎಂದು ಮೊಯ್ಲಿ ಅಭಿಪ್ರಾಯ ಪಟ್ಟರು. ಇತ್ತೀಚೆಗೆ ನಡೆದ ಎರಡು ಉಪಚುನಾವಣೆಗಳು ಇದನ್ನು ಸ್ಪಷ್ಟವಾಗಿ ನಿರೂಪಿಸಿವೆ. ಈ ಚುನಾವಣಾ ಫಲಿತಾಂಶ ವಿಪಕ್ಷದ ನಾಯಕ ಯಡಿಯೂರಪ್ಪ ರನ್ನು ಮುಗಿಸಿಬಿಟ್ಟಿತು ಎಂದರು.
ಸಿದ್ದರಾಮಯ್ಯ ಅವರು ತನ್ನ ಪಾರದರ್ಶಕ ಆಡಳಿತ ಮೂಲಕ ನೇರವಾಗಿ ಜನರ ಮನಸ್ಸನ್ನು ತಟ್ಟುವಂಥ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದೇ ಅ.1ರಿಂದ ಮಾತೃಪೂರ್ಣ ಯೋಜನೆಯನ್ನು ಅವರು ಜಾರಿಗೊಳಿಸಲಿದ್ದಾರೆ. ಈಗಾಗಲೇ ಜಾರಿಗೊಳಿಸಿರುವ ಇಂದಿರಾ ಕ್ಯಾಂಟೀನ್ ಭಾರಿ ಜನಪ್ರಿಯ ವಾಗಿದ್ದು, ಅದನ್ನೀಗ ಜಿಲ್ಲಾ ಕೇಂದ್ರಗಳಲ್ಲೂ ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಎಂದು ಮೊಯ್ಲಿ ನುಡಿದರು.
ಜಿಡಿಪಿಯಲ್ಲಿ ನಂ.1: ದೇಶದಲ್ಲೇ ಆರ್ಥಿಕವಾಗಿ ಅತ್ಯುತ್ತಮ ನಿರ್ವಹಣೆ ತೋರಿರುವ ರಾಜ್ಯ ಕರ್ನಾಟಕ ಎಂಬುದನ್ನು ಕೇಂದ್ರ ಸರಕಾರದ ಅಂಕಿ ಅಂಶಗಳೇ ಸಾರಿ ಹೇಳುತ್ತಿವೆ. ರಾಜ್ಯದ ಜಿಡಿಪಿ ಶೇ.8.5 ಆಗಿದ್ದು, ಇಡೀ ದೇಶದಲ್ಲಿ ಅಗ್ರಸ್ಥಾನದಲ್ಲಿದೆ. ಇದಕ್ಕೆ ಹೋಲಿಸಿದರೆ ದೇಶದ ಜಿಡಿಪಿ ಶೇ.5.7, ಅರ್ಧದಷ್ಟಿದೆ ಎಂದ ಮೊಯ್ಲಿ, ಬಡವರಿಗೆ ಕಾರ್ಯಕ್ರಮ ನೀಡಿದರೆ ಅದರಿಂದ ಆರ್ಥಿಕ ಬೆಳವಣಿಗೆ ಹೆಚ್ಚುತ್ತದೆ ಎಂಬುದನ್ನು ಸಿದ್ಧು ಸರಕಾರ ಸಾಬೀತು ಪಡಿಸಿದೆ ಎಂದರು.
ಯುಪಿಎ ಸರಕಾರದಿಂದ ಆಡಳಿತವನ್ನು ಪಡೆದ ನಂತರ ನರೇಂದ್ರ ಮೋದಿ ಸರಕಾರ ದೇಶದಲ್ಲಿ ಒಂದೇ ಒಂದು ಯುನಿಟ್ ವಿದ್ಯುತ್‌ನ್ನು ಹೆಚ್ಚು ಉತ್ಪಾದಿಸಿಲ್ಲ. ಈಗ ಅದರ ಅಗತ್ಯವೂ ಇಲ್ಲವಾಗಿದೆ. ಏಕೆಂದರೆ ನೋಟು ಅಮಾನ್ಯೀಕರಣದ ಬಳಿಕ ಹೆಚ್ಚಿನೆಲ್ಲಾ ಕೈಗಾರಿಕೆಗಳು ಬಾಗಿಲು ಮುಚ್ಚಿವೆ ಎಂದು ವಿವರಿಸಿದರು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಹಿರಿಯರು ಹಾಕಿಕೊಟ್ಟ ಹಾದಿಯಲ್ಲೇ ಕಾರ್ಯಕರ್ತರು ಸಾಗಬೇಕು ಹಾಗೂ ಮುಂದಿನ ಪೀಳಿಗೆಗೆ ಕಾಂಗ್ರೆಸ್ ಧ್ವಜವನ್ನು ಹಸ್ತಾಂತರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕ್ಷೇತ್ರದಲ್ಲಿ ತಾನು ಈಗಾಗಲೇ 59 ಜನಸಂಪರ್ಕ ಸಭೆಗಳನ್ನು ಮಾಡಿದ್ದೇನೆ. 209 ಬೂತ್‌ಗಳ ಭೇಟಿಯಲ್ಲಿ 418 ಸಭೆಗಳನ್ನು ಡಿಸೆಂಬರ್ ಒಳಗೆ ನಡೆಸುವ ಗುರಿ ಇದ್ದು ಈಗಾಗಲೇ 136 ಸಭೆ ನಡೆಸಿದ್ದೇನೆ. ಜನರ ಪ್ರತಿಕ್ರಿಯೆ ನೋಡಿ ಇನ್ನಷ್ಟು ಹುರುಪಿನಿಂದ ಜನಸೇವೆ ಮಾಡಲು ಸಿದ್ಧನಿದ್ದೇನೆ ಎಂದರು.
ಎಎಸಿಸಿ ಕಾರ್ಯದರ್ಶಿ ಹಾಗೂ ಮೈಸೂರು ವಲಯ ಉಸ್ತುವಾರಿ ವಿಷ್ಣುನಾಥನ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ನಾಯಕರಾದ ಮಾಜಿ ಶಾಸಕ ಗೋಪಾಲ ಭಂಡಾರಿ, ಜಿ.ಎ.ಭಾವಾ, ಎಂ.ಎ.ಗಫೂರ್, ವರೋನಿಕಾ ಕರ್ನೇಲಿಯೊ, ಮೀನಾಕ್ಷಿ ಮಾಧವ ಬನ್ನಂಜೆ, ಬಸವರಾಜ್, ದಿನೇಶ್ ಎಸ್.ಪಿ., ಮಂಜುನಾಥ್, ಜರ್ನಾದನ ತೋನ್ಸೆ, ಎಂ.ಸುಧಾಕರ ಶೆಟ್ಟಿ, ವಿಶ್ವಾಸ ಅಮೀನ್, ಅಜೀಜ್ ಹೆಜ್ಮಾಡಿ, ಇಸ್ಮಾಯಿಲ್ ಆತ್ರಾಡಿ, ನರಸಿಂಹ ಮೂರ್ತಿ, ಅಶೋಕ ಕೊಡವೂರು, ಯತೀಶ್ ಕರ್ಕೇರ, ಜಯಶ್ರೀ ಕೃಷ್ಣರಾಜ್, ನಾರಾಯಣ ಮುಂತಾದವರು ಉಪಸ್ಥಿತರಿದ್ದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಸ್ವಾಗತಿಸಿದರೆ, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ನಿತ್ಯಾನಂತ ಶೆಟ್ಟಿ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಕೆ.ಜನಾರ್ದನ ಭಂಡಾರ್ಕರ್ ವಂದಿಸಿ ಸತೀಶ್ ಕೊಡವೂರು ಕಾರ್ಯಕ್ರಮ ನಿರ್ವಹಿಸಿದರು.







