ಮನೆ ಕಳವು ಆರೋಪಿಯ ಬಂಧನ: ಚಿನ್ನಾಭರಣ ವಶ

ಶಂಕರನಾರಾಯಣ, ಸೆ. 24: ಬೆನ್ನಟ್ಟಿದ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಕಳ್ಳತನ ಪ್ರಕರಣ ಆರೋಪಿ ಆಜ್ರಿಯ ಪ್ರದೀಪ್ ಶೆಟ್ಟಿ(28) ಎಂಬಾತನನ್ನು ಬಂಧಿಸುವಲ್ಲಿ ಶಂಕರನಾರಾಯಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೆ.16ರಂದು ಆಜ್ರಿ ಗ್ರಾಮದ ಹೆದ್ದಾರಿ ಮನೆಯ ಮಾಲತಿ ಕುಲಾಲ್ ಎಂಬ ವರ ಮನೆಯ ಹಿಂದಿನ ಬಾಗಿಲಿನಿಂದ ಒಳ ಪ್ರವೇಶಿಸಿದ ಪ್ರದೀಪ್ ಶೆಟ್ಟಿ ಬೆಡ್‌ರೂಂನಲ್ಲಿಟ್ಟಿದ್ದ 4ಲಕ್ಷ ರೂ. ಮೌಲ್ಯದ ನಗನಗದು ಕಳವು ಮಾಡಿದ್ದನು. ಸೆ.22ರಂದು ಪ್ರದೀಪ್ ಆಜ್ರಿಯಲ್ಲಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ್ದರು.
ಆದರೆ ಪೊಲೀಸರನ್ನು ಕಂಡ ಪ್ರದೀಪ್ ಅಲ್ಲಿಂದ ಓಡಿ ಹೋದನು. ಬೆನ್ನಟ್ಟಿದ ಪೊಲೀಸರಿಂದ ತಪ್ಪಿಸಿಕೊಂಡ ಆತ ಅರಣ್ಯದೊಳಗೆ ಹೋಗಿ ನಾಪತ್ತೆಯಾಗಿ ದ್ದನು. ಬಳಿಕ ಆತನಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗಿತ್ತು. ಮರು ದಿನವೇ ಆತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆತನಿಂದ 4 ಚಿನ್ನದ ಬಳೆ, 4 ಉಂಗುರ, 1 ಚಿನ್ನದ ಸರ ಮತ್ತು 54,110ರೂ. ನಗದನ್ನು ವಶಪಡಿಸಿಕೊಂಡರು.
ಉಡುಪಿ ಜಿಲ್ಲಾ ಎಸ್ಪಿ ಡಾ.ಸಂಜೀವ ಎಂ.ಪಾಟೀಲ್ ನಿರ್ದೇಶನದಲ್ಲಿ, ಕುಂದಾಪುರ ಡಿವೈಎಸ್ಪಿ ಪ್ರವೀಣ ನಾಯಕ್ ಮಾರ್ಗದಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ, ಬೈಂದೂರು ವೃತ್ತ ನಿರೀಕ್ಷಕ ರಾಘವ ಪಡೀಲ್, ಶಂಕರನಾರಯಣ ಎಸ್ಸೈ ಸುನೀಲ್ ಕುಮಾರ್, ಸಿಬ್ಬಂದಿಗಳಾದ ಶುಭಕರ, ಚಂದ್ರಶೇಖರ, ಪ್ರಭಾಕರ, ರತ್ನಾಕರ, ರಿಯಾಜ್ ಅಹ್ಮದ್, ರಾಘವೇಂದ್ರ, ಸೀತಾರಾಮ್, ಪ್ರದೀಪ ಶೆಟ್ಟಿ, ಸುರೇಂದ್ರ ಶೆಟ್ಟಿ, ಪ್ರಶಾಂತ್, ಅಜೀತ್ ಹೆಗ್ಡೆ, ಉದಯ, ಅರುಣ ಕುಮಾರ್, ಭರತ್, ರಾಘವೇಂದ್ರ, ಪ್ರಭಾಕರ ಶೆಟ್ಟಿ, ರಾಜೀವ ಕುಲಾಲ್ ಈ ಕಾರ್ಯಾಚರಣೆ ನಡೆಸಿದ್ದಾರೆ.







