ರೆಡ್ಡಿ ಜನಾಂಗದ ಮೀಸಲಾತಿಗೆ ಸಿಎಂ ಭರವಸೆ: ಸಚಿವ ರಾಮಲಿಂಗಾರೆಡ್ಡಿ
ಉಚಿತ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ

ತುಮಕೂರು, ಸೆ.24: ರೆಡ್ಡಿ ಜನಾಂಗದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆ ಸರಕಾರದ ಮುಂದಿದ್ದು, ಮುಖ್ಯಮಂತ್ರಿಗಳು ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದು ರಾಜ್ಯ ಗೃಹ ಮಂತ್ರಿ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ನಗರದ ಜಾಸ್ ಟೋಲ್ ಬಳಿ ರೆಡ್ಡಿ ಜನ ಸಂಘ ಏರ್ಪಡಿಸಿದ್ದ ಉಚಿತ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಬಗ್ಗೆ ಸದ್ಯದಲ್ಲಿಯೇ ತೀರ್ಮಾನ ಹೊರಬೀಳಲಿದೆ ಎಂದರು.
ಹಳೆ ಮೈಸೂರು ,ಹೈದ್ರಾಬಾದ್-ಕರ್ನಾಟಕ ಮತ್ತು ಮುಂಬೈ-ಕರ್ನಾಟಕ ಸೇರಿದಂತೆ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ರೆಡ್ಡಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮಾವೇಶದ ನೆಪದಲ್ಲಿ ಎಲ್ಲರೂ ಒಟ್ಟಿಗೆ ಸೇರಲು ಸಾಧ್ಯವಾಯಿತು. ಸಮಾವೇಶದಲ್ಲಿ ಮುಖ್ಯಮಂತ್ರಿಗಳಿಗೆ ಮಾಡಿದ್ದ ಮನವಿ ಅನ್ವಯ ಹೇಮರೆಡ್ಡಿ ಮಲ್ಲಮ್ಮ ಮತ್ತು ವೇಮನ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ಅಲ್ಲದೆ, ವಿವಿಧ ವಿವಿಗಳಲ್ಲಿ ಈ ಇಬ್ಬರು ಮಹನೀಯರ ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಹುಟ್ಟೂರಿನಲ್ಲಿ 10 ಎಕರೆ ಜಮೀನಿನಲ್ಲಿ ಸ್ಮಾರಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಹಾಸ್ಟೆಲ್ ನಿರ್ಮಾಣಕ್ಕೆ ಕೈ ಹಾಕುವ ಮೂಲಕ ತುಮಕೂರು ರೆಡ್ಡಿ ಜನಸಂಘ ಉತ್ತಮ ಕೆಲಸ ಮಾಡುತ್ತಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆಗಿರುವ ಶಾಸಕ ಡಾ.ರಫೀಕ್ ಅಹ್ಮದ್ ಅವರು ದೊರಕಿಸಿಕೊಟ್ಟ ನಿವೇಶನದಲ್ಲಿ ಹುಡುಗರ ಹಾಸ್ಟಲ್ ನಿರ್ಮಿಸುತ್ತಿದ್ದು, ಹೆಣ್ಣು ಮಕ್ಕಳ ಹಾಸ್ಟೆಲ್‍ಗೂ ಜಾಗ ನೀಡುವ ಭರವಸೆಯನ್ನು ಶಾಸಕರು ನೀಡಿದ್ದಾರೆ. ನಮ್ಮ ಸಮುದಾಯಕ್ಕೆ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಸಲಹೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಈ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರಿಗೆ ಸಿಎಂ ಪದವಿ ಸಿಕ್ಕಿದ್ದು, ಅವರು ಸ್ವಾತಂತ್ರ್ಯ ಹೋರಾಟ ಗಾರರು, ದಕ್ಷ ಆಡಳಿತಗಾರರು ಎಂಬ ಕಾರಣಕ್ಕೆ. ಅವರ ಅವಧಿಯಲ್ಲಿ ನಿರ್ಮಾಣಗೊಂಡ ಬಿಎಚ್ ಇಎಲ್, ಬಿಇಎಲ್ ಮತ್ತಿತರರ ಕೈಗಾರಿಕೆಗಳು ಅವರ ದಕ್ಷತೆಗೆ ಹೆಸರಾಗಿವೆ ಎಂದ ಅವರು, ರೆಡ್ಡಿ ಜನಾಂಗ ಭೂ ಮಾಲೀಕರು ಎನ್ನುವುದಕ್ಕಿಂತ ಅನ್ಯಾಯದ ವಿರುದ್ಧ ನಿರಂತರ ಹೋರಾಟ ಮಾಡಿದವರು. ರೆಡ್ಡಿ ಜನಾಂಗ ರಾಜಕಿಯ, ಸಾಮಾಜಿಕವಾಗಿ ಮತ್ತಷ್ಟು ಸಂಘಟಿತರಾಗಬೇಕಾಗಿದೆ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ವಿಧಾನ ಸಭೆಯ ಉಪ ಸಭಾಪತಿ ಎನ್.ಎಚ್.ಶಿವಶಂಕರ್ ರೆಡ್ಡಿ, ಸಂಸದ ಎಸ್.ಪಿ.ಮುದ್ದಹನುಮೇಗೌಡ, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಶಾಸಕ ಡಾ.ರಫೀಕ್ ಅಹ್ಮದ್, ವಿಧಾನಪರಿಷತ್ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ, ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷ ಕೆ.ಶ್ರೀನಿವಾಸರೆಡ್ಡಿ, ಬಿ.ಎಂ.ಕಾಂತರಾಜು, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎ.ದೇವರಾಜ, ಮಾಜಿ ಶಾಸಕಿ ಜೋತಿ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.







