ಜಮ್ಮು ಕಾಶ್ಮೀರ: ಮೂವರು ಉಗ್ರರ ಹತ್ಯೆ

ಶ್ರೀನಗರ, ಸೆ. 24: ಉತ್ತರ ಕಾಶ್ಮೀರದ ಉರಿ ಪ್ರದೇಶದ ಗಡಿ ನಿಯಂತ್ರಣಾ ರೇಖೆ ಸಮೀಪ ರವಿವಾರ ಬೆಳಗ್ಗೆ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಶಂಕಿತ ಉಗ್ರರು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹತರಾದ ಉಗ್ರರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ ಎ ತೊಯ್ಬಾಕ್ಕೆ ಸೇರಿದ ಸದಸ್ಯರು ಎಂದು ಗುರುತಿಸಲಾಗಿದೆ. ಈ ಮೂವರು ಶಂಕಿತ ಉಗ್ರರನ್ನು ಹತ್ಯೆಗೈಯುವ ಮೂಲಕ ನಡೆಯಲಿದ್ದ ಪ್ರಮುಖ ಭಯೋತ್ಪಾದನಾ ದಾಳಿ ತಡೆದಂತಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಲಾಯಿಯಲ್ಲಿ ಶನಿವಾರ ರಾತ್ರಿ ಶಂಕಿತ ಉಗ್ರರ ಸಂಶಯಾಸ್ಪದ ಸಂಚಾರ ಗುರುತಿಸಿದ್ದ ಭದ್ರತಾ ಪಡೆ ಆ ಪ್ರದೇಶವನ್ನು ಸುತ್ತುವರಿಯಿತು. ಈ ಸಂದರ್ಭ ಬಾರಮುಲ್ಲಾ ಜಿಲ್ಲೆಯ ಉರಿಯಲ್ಲಿ ಗುಂಡಿನ ಚಕಮಕಿ ನಡೆಯಿತು.
ಸೇನೆ ಸುತ್ತುವರಿದ ಪ್ರದೇಶದಲ್ಲಿ ಸಿಲುಕಿದ್ದ ಗ್ರಾಮ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ ರಾಜ್ಯದ ಬಾರಮುಲ್ಲಾ ಜಿಲ್ಲೆಯ ಸೋಪೊರೆ ಚೌಕದಲ್ಲಿ ಉಗ್ರರು ವಾಹನದ ಮೇಲೆ ಗ್ರೆನೆಡ್ ಎಸೆದ ಪರಿಣಾಮ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಗ್ರೆನೆಡ್ ಸ್ಫೋಟಗೊಂಡ ಪರಿಣಾಮ ಇಬ್ಬರು ಪೊಲೀಸರು ಹಾಗೂ ಓರ್ವ ಸಿಆರ್‌ಪಿಎಫ್ ಯೋಧ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.





