ಮಾದಕ ವಸ್ತುಗಳ ದಾಸರಿಗೆ ನೆಮ್ಮದಿ ಜೀವನ ಇರಲಾರದು: ಡಾ.ವಿನಯ್ ಕುಮಾರ್

ಮೂಡಿಗೆರೆ, ಸೆ.24: ಮಾದಕ ವಸ್ತುಗಳ ದಾಸರಾಗಿರುವವರ ಕುಟುಂಬಕ್ಕೆ ನೆಮ್ಮದಿಯ ಜೀವನ ಇರಲಾರದು ಎಂದು ಮಲ್ಲೆಗೌಡ ಜಿಲ್ಲಾ ಆಸ್ಪತ್ರೆಯ ಮಾನಸಿಕ ಆರೋಗ್ಯ ಅಧಿಕಾರಿ ಡಾ.ವಿನಯ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ಡಿಎಸ್‍ಬಿಜಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಯುವರೆಡ್ ಕ್ರಾಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಶನಿವಾರ ನಡೆದ ಮಾದಕ ವಸ್ತುಗಳಿಂದಾಗುತ್ತಿರುವ ದುಷ್ಪರಿಣಾಮಗಳ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂಬಾಕು ಸೇವನೆ ಹಾಗೂ ಮದ್ಯಪಾನ ದಾಸರಾದವರಿಗೆ ಅನೇಕ ರೋಗ ರುಜಿನಗಳು ಆವರಿಸಿಕೊಳ್ಳುತ್ತದೆ. ಅಂತವರು ಯಾವುದೇ ರೋಗಗಳಿಗೆ ತುತ್ತಾದರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸಮಸ್ಯೆಯಾಗುತ್ತಿದೆ. ಚಿಕಿತ್ಸೆ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಮಾದಕ ವ್ಯಸನಿಗಳು ಹಂತಹಂತವಾಗಿ ಬಿಡಬೇಕೆಂದು ಸಲಹೆ ನೀಡಿದರು.
ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣಾಧಿಕಾರಿ ಜಲಜಾಕ್ಷಿ ಹಾಗೂ ಮೂಡಿಗೆರೆ ಎಂಜಿಎಂ. ಆಸ್ಪತ್ರೆಯ ಹರೀಶ್, ಏಡ್ಸ್ ರೋಗದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಸಿ.ಬಸವರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಯುವರೆಡ್ ಕ್ರಾಸ್ ಸಂಚಾಲಕ ದಯಾನಂದ, ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕ ರವೀಂದ್ರ ರಾಜನ್, ರಂಗಸ್ವಾಮಿ ಮತ್ತಿತರರಿದ್ದರು.





