ಜಯಲಲಿತಾ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಿ: ಕೇಂದ್ರ ಸರಕಾರಕ್ಕೆ ಸ್ಟಾಲಿನ್ ಆಗ್ರಹ

ಚೆನ್ನೈ, ಸೆ. 24: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ನಿಗೂಢತೆ ಬೇಧಿಸಲು ಸಿಬಿಐ ತನಿಖೆ ನಡೆಸಿ ಎಂದು ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ರವಿವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಸಿಬಿಐ ತನಿಖೆಗೆ ಆದೇಶ ನೀಡುವುದು ಸರಕಾರದ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.
ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಅವರ ಸಹಾಯಕಿ ವಿ.ಕೆ. ಶಶಿಕಲಾಗೆ ಹೆದರಿ ಎಐಎಡಿಎಂಕೆ ನಾಯಕರು ಸುಳ್ಳು ಹೇಳಿದ್ದರು ಎಂಬ ಅರಣ್ಯ ಸಚಿವ ದಿಂಡುಗಲ್ ಸಿ. ಶ್ರೀನಿವಾಸನ್ ಅವರ ಹೇಳಿಕೆಯನ್ನು ಸ್ಟಾಲಿನ್ ಉಲ್ಲೇಖಿಸಿದರು.
ದಿಲ್ಲಿಯ ಎಐಐಎಂಎಸ್ ತಂಡ ಆಗಮಿಸಿ ಜಯಲಲಿತಾ ಅವರಿಗೆ ಚಿಕಿತ್ಸೆ ನೀಡಿತ್ತು. ಜಯಲಲಿತಾ ಅವರ ಆರೋಗ್ಯದ ಬಗ್ಗೆ ಕೇಂದ್ರ ನಿಗಾ ಇಡಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದರು ಎಂದು ಸ್ಟಾಲಿನ್ ತಿಳಿಸಿದರು.
ಜಯಲಲಿತಾ ಅವರ ಚಿಕಿತ್ಸೆಗೆ ಕೇಂದ್ರ ಸರಕಾರ ಸಹಕರಿಸಿದೆ. ಆದುದರಿಂದ ಅವರ ಸಾವಿನ ನಿಗೂಢತೆ ಬೇಧಿಸುವ ಜವಾಬ್ದಾರಿಯನ್ನು ಕೇಂದ್ರ ಸರಕಾರ ಹೊರಬೇಕು. ಅಧಿಕಾರ ಉಪಯೋಗಿಸಿ ಜಯಲಲಿತಾ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಸ್ಟಾಲಿನ್ ಆಗ್ರಹಿಸಿದ್ದಾರೆ.







