ಸೋಮಣ್ಣನಿಗೆ ಸುಳ್ಳು ಹೇಳುವುದು ಬಿಟ್ಟು ಬೇರೇನೂ ಗೊತ್ತಿಲ್ಲ ಶಾಸಕ ಪುಟ್ಟರಂಗಶೆಟ್ಟಿ ತಿರುಗೇಟು

ಚಾಮರಾಜನಗರ, ಸೆ.24: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಚಾಮರಾಜನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನಗಳನ್ನು ನೀಡಲಾಗಿದ್ದು, ಜಿಲ್ಲೆಯಲ್ಲಿ ಅಭಿವೃದ್ಧಿ ಶೂನ್ಯವೆಂದು ಹೇಳುವ ಬಿಜೆಪಿ ಮುಖಂಡರಿಗೆ ಈ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಬಿಜೆಪಿ ಮುಖಂಡ ವಿ.ಸೋಮಣ್ಣರವರಿಗೆ ತಿರುಗೇಟು ನೀಡಿದ್ದಾರೆ.
ಚಾಮರಾಜನಗರ ತಾಲೂಕಿನ ಹುಲ್ಲೇಪುರ ಗ್ರಾಮದಲ್ಲಿ ರವಿವಾರ ನಡೆದ ಱಮನೆ ಮನೆಗೆ ಕಾಂಗ್ರೆಸ್‌ಱಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾನು ಈ ಹಿಂದೆ ಶಾಸಕನಾದ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಆಗ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರಕಾರ ನಯಾಪೈಸೆ ಅನುದಾನ ನೀಡಿರಲಿಲ್ಲ. 2013ರಲ್ಲಿ ತಾನು ಪುನಃ ಶಾಸಕನಾದೇ, ನಮ್ಮ ಪಕ್ಷವೇ ಅಧಿಕಾರಕ್ಕೆ ಬಂದ ಪರಿಣಾಮ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನವನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡುತ್ತಿದ್ದಾರೆಂದರು.
ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಗ್ರಾಮೀಣ ಭಾಗದ ಸಾವಿರಾರು ಬಡವರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ನೀಡಲಾಗಿದೆ. ನೂತನ ಸಮುದಾಯ ಭವನಗಳೂ ಸೇರಿದಂತೆ ಉತ್ತಮ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗಿದೆ. ಇದೆಲ್ಲಾ ಬಿಜೆಪಿ ಮುಖಂಡ ವಿ.ಸೋಮಣ್ಣನಿಗೇನು ಗೊತ್ತು?, ಅವರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಬೇರೇನು ಗೊತ್ತಿಲ್ಲ, ಅವರ ಅವಧಿಯಲ್ಲಿ ಚಾಮರಾಜನಗರಕ್ಕೆ ನೀಡಿದ ಕೊಡುಗೆಗಳೇನೆಂದು ಹೇಳಲಿ ಎಂದು ತಿರುಗೇಟು ನೀಡಿದ ಅವರು, ಯುಪಿಎ ಸರಕಾರದ ಸಾಧನೆಗಳನ್ನೇ ಪ್ರಧಾನಿ ನರೇಂದ್ರ ಮೋದಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ, ಆದರೆ ಬಿಜೆಪಿಯವರು ಮೋದಿ ಅವರ ಬಗ್ಗೆ ಜನರಲ್ಲಿ ಭ್ರಮೆ ಹುಟ್ಟಿಸುತ್ತ ಬೊಗಳೆ ಬಿಡುತ್ತಿದ್ದಾರೆಂದು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.







