ಕಣ್ಣಿಗೆ ಕಟ್ಟಿದ ಮೈಸೂರು ಮಹಾರಾಜರ ಆಳ್ವಿಕೆಯ ಗತಕಾಲದ ಚಿತ್ರಣ

ಕಡೂರು, ಸೆ. 24: ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ವಿಶಿಷ್ಟತೆಯಿಂದ ಕೂಡಿದ್ದರೆ ಆ ದರ್ಬಾರ್ ಕಾರ್ಯಕ್ರಮದೊಳಗೆ ನಡೆಯುವ ನಝರ್ ಕಾರ್ಯಕ್ರಮ ವೈಭವಯುತ ಮತ್ತು ಮೈಸೂರು ಮಹಾರಾಜರ ಆಳ್ವಿಕೆಯ ಗತಕಾಲದ ಚಿತ್ರಣವನ್ನು ಮತ್ತೊಮ್ಮೆ ಕಣ್ಣಿಗೆ ಕಟ್ಟಿಕೊಡುತ್ತದೆ.
ಒಂಭತ್ತು ದಿನಗಳ ಕಾಲ ನಡೆಯುವ ದಸರಾ ದರ್ಬಾರ್ ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ನಡೆಯುವ ನಝರ್ ಕಾರ್ಯಕ್ರಮ ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಅರಮನೆಯಲ್ಲಿ ರಾಜರ ರಕ್ಷಣೆ ಮತ್ತು ಅರಮನೆಯ ರಕ್ಷಣೆ ಹಿನ್ನೆಲೆಯಲ್ಲಿ ಹುಟ್ಟಿದ ಕಾರ್ಯಕ್ರಮ ವಿಶೇಷವಾಗಿ ಇದು ಗುರುವಂದನೆ ಅರ್ಥಾತ್ ರಾಜವಂದನೆ ಎಂದೇ ಕರೆಯಬಹುದು.
ನವರಾತ್ರಿಯ ಸಂದರ್ಭದಲ್ಲಿ ನವಶಕ್ತಿಗಳ ಆರಾಧನೆ ಮಾಡಿ ದುಷ್ಟತನದ ಸಂಹಾರ ಮಾಡಿ ನಡೆಯುವ ಪೂಜಾ ಕೈಂಕರ್ಯಗಳು ಹಾಗೂ ಸಭಾ ಕಾರ್ಯಕ್ರಮಗಳ ಬಳಿಕ ಈ ನಝರ್ ನಡೆಯುತ್ತದೆ. ಇದನ್ನು ನೋಡುವುದೇ ಕಣ್ಣಿಗೆ ಸೊಬಗು. ಇತಿಹಾಸದ ಮರುಕಳಿಸಿದ ವೈಭವವೇ ನಮ್ಮ ಕಣ್ಣ ಮುಂದೆ ಕಟ್ಟಿದಂತೆ ಆಗುತ್ತದೆ.
ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಮೊದಲು ರಂಭಾಪುರಿ ಶಾಖಾ ಮಠಗಳ ವಿವಿಧ ಶಿವಾಚಾರ್ಯರುಗಳು ಎರಡು ಕೈಗಳನ್ನು ಕಟ್ಟಿ ಶಿರಬಾಗಿ ಬೆನ್ನುಬಾಗಿ ಗುರುವಂದನೆಯನ್ನು ಸಲ್ಲಿಸುತ್ತಾರೆ. ನಂತರ ಪೀಠದ ಆಡಳಿತಾಧಿಕಾರಿ ಗೌರವ ಸಮರ್ಪಣೆ ಮಾಡುತ್ತಾರೆ. ಬಳಿಕ ಪೀಠದ ಏಜೆಂಟರುಗಳು ಅಂದರೆ ದಸರಾ ದರ್ಬಾರ್ ಕಾರ್ಯಕ್ರಮ ನಡೆಯುವ ಬಗ್ಗೆ ವಿವಿಧ ಗ್ರಾಮಗಳು ಮತ್ತು ಸ್ಥಳಗಳಲ್ಲಿ ಜನರಿಗೆ ಮಾಹಿತಿ ಒದಗಿಸುವ ಕೆಲಸವೇ ಈ ಏಜೆಂಟರದ್ದು. ಅವರಿಂದ ಜಗದ್ಗುರುಗಳಿಗೆ ನಝರ್ ಸಮರ್ಪಣೆ ಆಗುತ್ತದೆ.
ಇವರ ನಝರ್ ಬಳಿಕ ರಕ್ಷಣೆ ಮಾಡುವ ಈಟಿಧಾರಿಗಳು, ಖಡ್ಗಧಾರಿಗಳಾದ ಮಂತ್ರಿಗಳು, 21 ಬಂದೂಕುಧಾರಿಗಳಿಂದ ಜಗದ್ಗುರುಗಳಿಗೆ ಗೌರವ ಸಮರ್ಪಿಸುವ ನಝರ್ ನಡೆಯುತ್ತದೆ. ವಾಸ್ತವವಾಗಿ ಬಂದೂಕುಧಾರಿಗಳು ತೋಪನ್ನು ಸಿಡಿಸಿ ನಝರ್ ಸಮರ್ಪಿಸಬೇಕು. ಆದರೆ ಸುರಕ್ಷತೆಯ ದೃಷ್ಟಿಯಿಂದ ತೋಪನ್ನು ಸಿಡಿಸದೆ ಕೇವಲ ಬಂದೂಕುಧಾರಿಗಳಿಂದ ನಝರ್ ಆರ್ಪಿಸಲಾಗುತ್ತದೆ. ಆ ಬಳಿಕ ಗುರುಮನೆಯ ಕೆಲಸಗಾರರು, ಹಿರಿಯರು, ಆರತಿ ಹಿಡಿದ ಮುತ್ತೈದೆಯರು, ರಾಜಕಾರಣಿಗಳು, ಗಣ್ಯರು, ಮಹಾತ್ಮರ ಹಾಗೂ ಪೌರಾಣಿಕ, ಐತಿಹಾಸಿಕ ವ್ಯಕ್ತಿಗಳ ವೇಷಧಾರಿಗಳು ಹೀಗೆ ಪ್ರತಿಯೊಬ್ಬರಿಂದಲೂ ನಝರ್ ಸಮರ್ಪಣೆ ನಡೆಯುತ್ತದೆ.
ಇಷ್ಟೇ ಆದರೆ ಸಾಲದು ಪೀಠದ ಸಾಕು ಪ್ರಾಣಿಗಳಿಂದಲೂ ನಝರ್ ಸರ್ಮಪಣೆ ಕಾರ್ಯ ನಡೆಯುತ್ತದೆ. ಅದರಂತೆ ಬಾಳೇಹೊನ್ನೂರು ರಂಭಾಪುರಿ ಮಠದ ಆನೆ ವೇದಿಕೆಯತ್ತ ಸಾಗಿ ಬಂದು ಜಗದ್ಗುರುಗಳಿಗೆ ತನ್ನ ಸೊಂಡಿಲನ್ನು ಎತ್ತಿ ನಮಸ್ಕರಿಸಿ ಮಂಡಿಯೂರಿ ನಝರ್ ಸರ್ಮಪಣೆ ಮಾಡುವ ದೃಶ್ಯವಂತೂ ನೆರೆದಿದ್ದ ಜನರ ಕಣ್ಣಿಗೆ ಸಂಭ್ರಮವನ್ನು ತರುತ್ತದೆ.







