ಸಂಸ್ಕೃತಿ ಎನ್ನುವುದು ಒಂದು ಸಂಸ್ಥೆಯಲ್ಲ ಅದು ಪ್ರತಿಯೊಬ್ಬರ ಸ್ವತ್ತು: ವಿಚಾರವಾದಿ ಪ್ರೊ.ಬಡಿಗೇರ್

ದಾವಣಗೆರೆ, ಸೆ.24: ನಮ್ಮ ವ್ಯಕ್ತಿತ್ವ ಬೆಳವಣಿಗೆ ಸೇರಿದಂತೆ ರಾಜ್ಯ, ದೇಶ ಅಭಿವೃದ್ಧಿಗೊಳ್ಳಬೇಕಾದರೆ ಸಂಸ್ಕೃತಿ ಕ್ಷೇತ್ರದಲ್ಲಿ ಯುವಜನತೆ ತೊಡಗಿಸುವಂತೆ ಅವಕಾಶ ಕಲ್ಪಿಸಬೇಕು ಎಂದು ವಿಚಾರವಾದಿ ಪ್ರೊ.ಡಿ.ಬಿ.ಬಡಿಗೇರ್ ತಿಳಿಸಿದ್ದಾರೆ.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಕರ್ನಾಟಕ ಯುವಜನ ಸಂಘರ್ಷ ಸಮಿತಿ, ರಾಜ್ಯ ಸಾಂಸ್ಕೃತಿಕ ಸಂಘರ್ಷ ಸಮಿತಿ, ರಾಜ್ಯ ತಾಂಡಾಭಿವೃದ್ಧಿ ಸಂಘರ್ಷ ಸಮಿತಿ ವತಿಯಿಂದ ದಸರಾ ಯುವಜನ ಸಾಂಸ್ಕೃತಿಕೋತ್ಸವ 2016-17ರ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶದಲ್ಲಿ ಹಿಂದು, ಮುಸ್ಲಿಂ, ಜೈನ್ ಹೀಗೆ ಎಲ್ಲಾ ಧರ್ಮಗಳ ಸಂಸ್ಕೃತಿಯನ್ನು ಒಳಗೊಂಡಿದ್ದು, ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೇ ನಮ್ಮ ದೇಶವನ್ನು ಎತ್ತರಕ್ಕೆ ಕೊಂಡೊಯ್ಯಲು ಸಂಸ್ಕೃತಿ ಸಹಕಾರಿಯಾಗುತ್ತದೆ ಎಂದರು.
ಸಂಸ್ಕೃತಿ ಎನ್ನುವುದು ಒಂದು ಸಂಸ್ಥೆಯಲ್ಲ. ಅದು ಪ್ರತಿಯೊಬ್ಬರ ಸ್ವತ್ತಾಗಿದೆ. ಸಂಸ್ಕೃತಿಯು ಅಖಂಡವಾಗಿದ್ದು, ಜನ ಸಮುದಾಯದ ದಿನನಿತ್ಯದ ಕಷ್ಟ ಕಾರ್ಪುಣ್ಯಗಳೇ ಸಂಸ್ಕೃತಿ ಎಂದು ಮಹಾನ್ ವ್ಯಕ್ತಿಗಳು ಹೇಳಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ಬಹುಮುಖಿ ಸಂಸ್ಕೃತಿ ನೋಡಬಹುದಾಗಿದ್ದು, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕು. ಮಾಧ್ಯಮಗಳು ಬದುಕಿಗೆ ಅವಶ್ಯಕತೆ ಇಲ್ಲದೆ ಇರುವ ದೃಶ್ಯಗಳನ್ನು ಬಿತ್ತಿರಸಲಾಗುತ್ತಿದೆ. ಜನಪರ ಸಂಸ್ಕೃತಿ ಮೇಲೆ ನಿರಂತರವಾಗಿ ದಬ್ಬಾಳಿಕೆ ಮಾಡಿ ಒಂದೇ ಧರ್ಮ, ಸಂಸ್ಕೃತಿ ಎನ್ನುವ ಕಾರಣಕ್ಕಾಗಿಯೇ ದೇಶದಲ್ಲಿ ಅಸಹಿಷ್ಣುತೆ ಉಳಿದುಕೊಂಡಿದೆ ಎಂದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ, ಸಂಸ್ಕೃತಿಕ ಕಾರ್ಯಕ್ರಮಕ್ಕೆ ಸಂಘಟನೆಗಳು ಹೆಚ್ಚು ಒತ್ತು ನೀಡಬೇಕು. ಸಂಸ್ಕೃತಿಯ ಉತ್ಸವಕ್ಕೆ ಕಳೆ ಬರಬರೇಕಾಗಿದ್ದು, ನಮ್ಮ ಕಡೆಯಿಂದಲೂ ಸಹಕಾರ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ರಾಮಚಂದ್ರನಾಯ್ಕ್, ಯುವಜನ ಚಿಂತಕ ಅರಸಿಕೆರೆ ಕೊಟ್ರೇಶ್, ಶಿಕ್ಷಣ ಸಂಯೋಜನಕ ಎಸ್.ಡಿ.ಮಹಮ್ಮದ್ ಭಾಷಾ, ವಕೀಲ ಎ.ವೈ.ಕೃಷ್ಣಮೂರ್ತಿ, ಅನಿಷ್‍ಪಾಷಾ, ಎಲ್.ರವಿಕುಮಾರ್, ಎಚ್.ಕೆ.ವೆಂಕಟೇಶ್ ಮತ್ತಿತರರು ಇದ್ದರು.







