ಮಂತ್ರಿಗಳಾದವರು ಅಧಿಕಾರ ದುರ್ಬಳಕೆ ಮಾಡಿ ಜನರ ನಿರೀಕ್ಷೆ ಹುಸಿಗೊಳಿಸಿದ್ದಾರೆ: ಮಧು ಬಂಗಾರಪ್ಪ

ಸೊರಬ, ಸೆ.24: ಜನರ ಆಶೀರ್ವಾದ ಪಡೆದು ಮಂತ್ರಿಗಳಾದವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಜನರ ನಿರೀಕ್ಷೆ ಹುಸಿಗೊಳಿಸಿ ಅಧಿಕಾರ ಕಳೆದುಕೊಂಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮತ್ತದೇ ಹುಸಿ ಭರವಸೆಗಳೊಂದಿಗೆ ಮತ ಕೇಳಲು ಬರುವ ನಾಯಕರಿಗೆ ಪ್ರಶ್ನಿಸಬೇಕೆಂದು ಶಾಸಕ ಮಧುಬಂಗಾರಪ್ಪ ಹೇಳಿದರು.
ರವಿವಾರ ತಾಲೂಕಿನ ತೆಕ್ಕೂರು, ಗುಡವಿ ಹಾಗೂ ಅಂಕರವಳ್ಳಿ ಗ್ರಾಮದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ರೂ 3.72 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪಕ್ಷಾತೀತವಾಗಿ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಪಡೆದು ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಕ್ತಿ ಮೀರಿ ಕೆಲಸ ಮಾಡುವುದಾಗಿ ತಿಳಿಸಿದರು.
ಎರಡು ಬಾರಿ ಚುನಾವಣೆಯಲ್ಲಿ ಸೋತಿರುವ ತಮಗೆ ಅಧಿಕಾರ ಇಲ್ಲದಿರುವ ಸಮಯದಲ್ಲೂ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿರುವುದರಿಂದ ಸಾಕಷ್ಟು ಅನುಭವ ಪಡೆದಿದ್ದೇನೆ. ತಾಲೂಕಿನ ಜನರು ಅಭಿವೃದ್ಧಿ ಪರವಿರುವ ವ್ಯಕ್ತಿಯನ್ನು ಕೈಹಿಡಿಯಲು ಹಿಂಜರಿಯುವುದಿಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದ್ದು, ಇನ್ನಷ್ಟು ಗ್ರಾಮೀಣ ಪ್ರದೇಶದಲ್ಲಿನ ಅಭಿವೃದ್ಧಿಗಾಗಿ ಮತ್ತೊಮ್ಮೆ ದೂರದೃಷ್ಟಿ ಹೊಂದಿರುವ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಗ್ರಾಮಸ್ಥರ ಸಲಹೆ ಸಹಕಾರ ಪಡೆದು ಸಂಬಂಧಪಟ್ಟ ಇಂಜನಿಯರ್ ಹಾಗೂ ಗುತ್ತಿಗೆದಾರರು ಕಾಮಗಾರಿ ಗುಣಮಟ್ಟ ಕಳಪೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.
ತವನಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಮಲಾಕ್ಷಿ ಮಲ್ಲಿಕಾರ್ಜುನ, ಉಪಾಧ್ಯಕ್ಷ ಹರೀಶಗೌಡ, ಸದಸ್ಯರಾದ ಸಾದಿಕ್ ಅಲಿ, ಶಿವಮ್ಮ ಕನ್ನಪ್ಪ, ಯಲ್ಲಮ್ಮ, ಗುತ್ಯಮ್ಮ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವಲಿಂಗಗೌಡ್ರು, ವೀರೇಶ್ ಕೊಟಗಿ, ತಾಲೂಕು ಪಂಚಾಯತ್ ಸದಸ್ಯ ಪುರುಷೋತ್ತಮ್, ಎಚ್.ಗಣಪತಿ, ಶೇಖರ್, ಒ.ಬಿ.ರಾಜಶೇಖರ್, ಪುಟ್ಟಪ್ಪ ತೆಕ್ಕೂರು, ಗಿರಿಯಪ್ಪ, ಮಹದೇವಪ್ಪ, ಕೆರೆಸ್ವಾಮಿ, ಹೇಮಚಂದ್ರಪ್ಪ, ಗಿರಿಯಪ್ಪ, ಹನುಮಂತಪ್ಪ, ಬಸವರಾಜಗೌಡ ಮತ್ತಿತರರಿದ್ದರು.







