ಭ್ರಷ್ಟಾಚಾರ ಪ್ರಕರಣ:ಸಿಬಿಐ ಮುಂದೆ ಹಾಜರಿಗೆ ಎರಡು ವಾರ ಕಾಲಾವಕಾಶ ಕೋರಿದ ಲಾಲು

ಹೊಸದಿಲ್ಲಿ,ಸೆ.25: ಆರ್‌ಜೆಡಿ ಮುಖ್ಯಸ್ಥ ಲಾಲುಪ್ರಸಾದ ಯಾದವ್ ಅವರು, ತಾನು ರೈಲ್ವೆ ಸಚಿವನಾಗಿದ್ದಾಗ ಎರಡು ಐಆರ್‌ಸಿಟಿಸಿ ಹೋಟೆಲ್‌ಗಳ ನಿರ್ವಹಣೆ ಗುತ್ತಿಗೆಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆಗಾಗಿ ಸಿಬಿಐ ಎದುರು ಹಾಜರಾಗಲು ಎರಡು ವಾರಗಳ ಸಮಯಾವಕಾಶವನ್ನು ಕೋರಿದ್ದಾರೆ.
ತನಿಖಾ ತಂಡದ ಮುಂದೆ ವಿಚಾರಣೆಗಾಗಿ ಸಿಬಿಐ ಎರಡನೇ ಬಾರಿ ಯಾದವಗೆ ನೋಟಿಸನ್ನು ಹೊರಡಿಸಿದ್ದು, ಅವರ ಪರ ವಕೀಲರು ಎರಡು ತಿಂಗಳ ಕಾಲಾವಕಾಶವನ್ನು ಕೋರಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿದವು.
ಲಾಲು ಅವರ ಮನವಿಯನ್ನು ಸಿಬಿಐ ಪರಿಶೀಲಿಸುತ್ತಿದ್ದು, ಭವಿಷ್ಯದ ಕ್ರಮವನ್ನು ನಿರ್ಧರಿಸಲಿದೆ ಎಂದೂ ಅವು ಹೇಳಿದವು.
ಲಾಲು ಪುತ್ರ ಹಾಗೂ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ ಕುರಿತು ವಕೀಲರು ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಮಂಗಳವಾರ ತನ್ನೆದುರು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಕಿರಿಯ ಯಾದವಗೆ ಸಮನ್ಸ್ ಜಾರಿಗೊಳಿಸಿದೆ.
ಇದಕ್ಕೂ ಮುನ್ನ ಸೆ.11 ಮತ್ತು 12ರಂದು ತನ್ನೆದುರು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ತಂದೆ-ಮಗನಿಗೆ ಸಮನ್ಸ್ ಕಳುಹಿಸಿತ್ತಾದರೂ, ಇಬ್ಬರೂ ಬೇರೆ ಬೇರೆ ಕಾರಣ ಗಳಿಂದ ಗೈರುಹಾಜರಾಗಿದ್ದರು.







