ಬಜರಂಗದಳ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸರು
ಮುಸ್ಲಿಮ್ ಯುವಕನನ್ನು ಮದುವೆಯಾದ ಹಿಂದೂ ಯುವತಿಗೆ ಬಲವಂತದ ‘ಶುದ್ಧೀಕರಣ’

ಸಾಂದರ್ಭಿಕ ಚಿತ್ರ
ಉತ್ತರಪ್ರದೇಶ, ಸೆ.25: ಪೊಲೀಸ್ ಕಸ್ಟಡಿಯಲ್ಲಿದ್ದ ಜೋಡಿಯನ್ನು ಎಳೆದೊಯ್ಯಲು ಯತ್ನಿಸಿದ್ದಲ್ಲದೆ, ಬಲವಂತವಾಗಿ ‘ಶುದ್ಧೀಕರಣ’ಕ್ಕೆ ಮುಂದಾದ ಬಜರಂಗದಳ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಹಾಪುರ್ ನಲ್ಲಿ ನಡೆದಿದೆ.
ಮದುವೆಯಾದ ನಂತರ ಯುವಕ ಹಿಂದೂ ಯುವತಿಯನ್ನು ಇಸ್ಲಾಮ್ ಗೆ ಮತಾಂತರ ಮಾಡಲು ಯತ್ನಿಸಿದ್ದಾನೆ ಎಂದು ಬಜರಂಗದಳದ ಕಾರ್ಯಕರ್ತರು ಆರೋಪಿಸಿದ್ದಾರೆ.
ಬಜರಂಗದಳ ಕಾರ್ಯಕರ್ತರು ಯುವತಿಯನ್ನು ‘ಶುದ್ಧೀಕರಣ’ಕ್ಕೆ ಒತ್ತಾಯಿಸಿದಾಗ ಪೊಲೀಸರು ಲಾಠಿ ಬೀಸಿದರು. ನಂತರ ಜೋಡಿಗೆ ಪೊಲೀಸ್ ಠಾಣೆಯಲ್ಲಿ ರಕ್ಷಣೆ ನೀಡಿದರು. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಹಾಪುರದ ಎಸ್ಪಿ ಹೇಮಂತ್ ಕುಟೇಲಿಯಾ ಮಾಹಿತಿ ನೀಡಿದ್ದಾರೆ.
ಬಜರಂಗದಳ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದನ್ನು ವಿರೋಧಿಸಿ ಮೀರತ್ ನ ಬಿಜೆಪಿ ಸಂಸದ ರಾಜೇಂದ್ರ ಅಗರ್ವಾಲ್ ಹಾಗೂ ಇತರ ನಾಯಕರು ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಆದಿತ್ಯನಾಥ್ ರ ಜೊತೆ ಈ ಬಗ್ಗೆ ಮಾತನಾಡಿದ ನಂತರ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಯಿತು.
ಈ ಬಗ್ಗೆ ಮಾತನಾಡಿದ ಉತ್ತರ ಪ್ರದೇಶ ಬಜರಂಗದಳದ ಮುಖಂಡ ಬಲ್ ರಾಜ್ ಸಿಂಗ್, ಆಕೆಯನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರಲು ಕಾರ್ಯಕರ್ತರು ಶುದ್ಧೀಕರಣಕ್ಕೆ ಮುಂದಾಗಿದ್ದರು. ಯುವತಿಯನ್ನು ಮದುವೆಯಾದ ನಂತರ ಆತ ಇಸ್ಲಾಮ್ ಧರ್ಮ ಸ್ವೀಕರಿಸುವಂತೆ ಒತ್ತಾಯಿಸಿದ್ದ. ನಾವಿದನ್ನು ಸಹಿಸುವುದಿಲ್ಲ” ಎಂದು ಹೇಳಿದ್ದಾನೆ.
ಆದರೆ ಮದುವೆಯಾಗಲು ಯಾರೂ ತನ್ನನ್ನು ಒತ್ತಾಯಿಸಿಲ್ಲ ಎಂದು ಯುವತಿ ತಿಳಿಸಿದ್ದಾಳೆ.







