ಜಯಲಲಿತಾ ಸಾವಿನ ಬಗ್ಗೆ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇಮಕ

ಚೆನ್ನೈ, ಸೆ.25: ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸಲು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಎ.ಆರ್ಮುಗಸಾಮಿ ಅವರನ್ನು ರಾಜ್ಯ ಸರಕಾರ ನೇಮಿಸಿದೆ.
ಎಐಎಡಿಎಂಕೆಯ ಉಭಯ ಬಣಗಳ ವಿಲೀನ ಪ್ರಕ್ರಿಯೆ ಸಂದರ್ಭ ‘ಅಮ್ಮ’ ನಿಧನದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂಬ ಷರತ್ತನ್ನು ಪನ್ನೀರ್‌ಸೆಲ್ವಂ ಮಂಡಿಸಿದ್ದರು.
ಸುದೀರ್ಘಾವಧಿಯ ಅನಾರೋಗ್ಯದ ಬಳಿಕ ಕಳೆದ ವರ್ಷದ ಡಿಸೆಂಬರ್ 5ರಂದು ಜಯಲಲಿತಾ ಹೃದಯಾಘಾತದಿಂದ ನಿಧನರಾಗಿದ್ದರು. ಜಯಲಲಿತಾ ನಿಧನದ ಬಗ್ಗೆ ತನಿಖೆ ನಡೆಯಬೇಕೆಂದು ಎಐಎಡಿಂಕೆಯ ಒಂದು ಬಣ ಪಟ್ಟುಹಿಡಿದಿದ್ದರೆ, ಶಶಿಕಲ(ದಿನಕರನ್) ನೇತೃತ್ವದ ಬಣ ಅದರ ಅಗತ್ಯವೇ ಇಲ್ಲ ಎಂದು ಹೇಳುತ್ತಾ ಬಂದಿದೆ.
ಅಮ್ಮ(ಜಯಲಲಿತಾ) ನಿಧನದ ಕುರಿತ ನಿಗೂಢತೆ ಬೇಧಿಸಲು ನ್ಯಾಯಾಂಗ ತನಿಖೆಗೆ ಆದೇಶಿಸಲಾಗುವುದು ಎಂದು ಆಗಸ್ಟ್ 17ರಂದು ಮುಖ್ಯಮಂತ್ರಿ ಪಳನಿಸ್ವಾಮಿ ಘೋಷಿಸಿದ್ದರು. ಜಯಲಲಿತಾ ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಬೇಕೆಂದು ಪನ್ನೀರ್‌ಸೆಲ್ವಂ ಆಗ್ರಹಿಸಿದ್ದರು. ‘ಅಮ್ಮ’ ಆಸ್ಪತ್ರೆಗೆ ದಾಖಲಾಗಿದ್ದ 75 ದಿನಗಳ ಅವಧಿಯಲ್ಲಿ ತನಗಾಗಲೀ ಅಥವಾ ತನ್ನ ಬೆಂಬಲಿಗರಿಗಾಗಲೀ ಜಯಲಲಿತಾರನ್ನು ಭೇಟಿಯಾಗಲು ಶಶಿಕಲಾ ಬೆಂಬಲಿಗರು ಅವಕಾಶ ನೀಡಲಿಲ್ಲ ಎಂದು ಪನ್ನೀರ್‌ಸೆಲ್ವಂ ದೂರಿದ್ದರು. ಅಲ್ಲದೆ ‘ಅಮ್ಮ’ನನ್ನು ಚಿಕಿತ್ಸೆಗಾಗಿ ಅಮೆರಿಕ ಅಥವಾ ಇಂಗ್ಲೆಂಡಿಗೆ ಕರೆದೊಯ್ಯಬೇಕೆಂಬ ತನ್ನ ಸಲಹೆಗೂ ಶಶಿಕಲಾ ಬಣ ಕಿವಿಗೊಡಲಿಲ್ಲ ಎಂದು ಪನ್ನೀರ್‌ಸೆಲ್ವಂ ಆರೋಪಿಸಿದ್ದರು.
ಶಶಿಕಲಾರ ಬಗ್ಗೆ ಭಯದಿಂದ ಪಕ್ಷದ ಪ್ರಮುಖರು ಜಯಲಲಿತಾ ಆರೋಗ್ಯದ ಕುರಿತು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದೆವು ಎಂದು ಕೆಲದಿನದ ಹಿಂದೆಯಷ್ಟೇ ರಾಜ್ಯದ ಅರಣ್ಯ ಸಚಿವ ಡಿಂಡಿಗಲ್ ಶ್ರೀನಿವಾಸನ್ ಒಪ್ಪಿಕೊಂಡಿದ್ದರು. ‘ಅಮ್ಮ’ನನ್ನು ನೋಡಲು ಯಾರು ಬಂದರೂ, ಅವರು ಹುಷಾರಾಗಿದ್ದಾರೆ ಎಂದು ಹೇಳಿ ಶಶಿಕಲಾ ಸಂಬಂಧಿಗಳು ಅವರನ್ನು ಸಾಗಹಾಕುತ್ತಿದ್ದರು ಎಂದು ಶ್ರೀನಿವಾಸನ್ ಹೇಳಿದ್ದರು.
ಆದರೆ ಈ ಆರೋಪವನ್ನು ಎಐಎಡಿಎಂಕೆಯ ಭಿನ್ನಮತೀಯ ಬಣದ ಮುಖಂಡ ದಿನಕರನ್ ನಿರಾಕರಿಸಿದ್ದಾರೆ. ಅಪೋಲೊ ಆಸ್ಪತ್ರೆಯಲ್ಲಿ ಜಯಲಲಿತಾ ಟಿವಿ ನೋಡುತ್ತಿರುವ ವೀಡಿಯೊ ದೃಶ್ಯಾವಳಿ ತನ್ನ ಬಳಿ ಇದೆ. ಆದರೆ ಆ ಸಂದರ್ಭ ಜಯಲಲಿತಾ ‘ರಾತ್ರಿ ಉಡುಗೆ’ ಧರಿಸಿದ್ದು, ‘ಅಮ್ಮ’ನ ಘನತೆಗೆ ಕುಂದಾಗಬಾರದು ಎಂಬ ಕಾರಣ ಈ ವೀಡಿಯೊ ದೃಶ್ಯಾವಳಿ ಬಹಿರಂಗಗೊಳಿಸಿಲ್ಲ ಎಂದು ದಿನಕರನ್ ಹೇಳಿದ್ದರು.
‘ಅಮ್ಮ’ನ ಸಾವಿನ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಿದರೆ ಆಗ ಈ ವೀಡಿಯೊ ದೃಶ್ಯಾವಳಿ ಬಹಿರಂಗಗೊಳಿಸುವಂತೆ ಶಶಿಕಲಾ ಸೂಚನೆ ನೀಡಿದ್ದಾರೆ ಎಂದು ದಿನಕರನ್ ತಿಳಿಸಿದ್ದಾರೆ.







