ಗ್ರಾಮೀಣ ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುವ 'ಮೂಡುಕುದ್ರು'
ಉಡುಪಿ, ಸೆ.25: ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲು ಜಿಲ್ಲಾಡಳಿತ, ಹಲವು 'ಪ್ರಥಮ' ಕಾರ್ಯಕ್ರಮಗಳನ್ನು ಈ ವರ್ಷ ಆಯೋಜಿಸಿದ್ದು, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ 'ಸುಸ್ಥಿರ ಅಭಿವೃದ್ಧಿಗೆ ಪ್ರವಾಸೋದ್ಯಮ' ಎಂಬ ಘೋಷವಾಕ್ಯದಡಿ ಸೆ.26ರ ಸಂಜೆ ಬಾರಕೂರಿನ ಕತ್ತಲೆ ಬಸದಿಯಲ್ಲಿ ದೀಪಗಳನ್ನು ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ.
ಸೆ.27ರಂದು ಬೆಳಗ್ಗೆ ಸಮಗ್ರ ಪ್ರವಾಸೋದ್ಯೋಮದ ಕುರಿತು ಮಾಹಿತಿ ನೀಡುವ ಕಾರ್ಯಕ್ರಮಗಳು ಮಣಿಪಾಲದ ಜಿಲ್ಲಾಡಳಿತ ಸಂಕೀರ್ಣದಲ್ಲಿ ಆಯೋಜಿತವಾಗಿದೆ. ಅದೇ ದಿನ ಸಂಜೆ ಕಲ್ಯಾಣಪುರದ ಮೂಡುಕುದ್ರುವಿನ ಸೀತಾನದಿ ಬಳಿ ಇರುವ ಕಲ್ಪವೃಕ್ಷ ದ್ವೀಪ ಸಾರ್ವಜನಿಕರಿಗೆ ತೆರೆಯಲ್ಪಡಲಿದೆ.
ಉಡುಪಿ ಜಿಲ್ಲೆ ತನ್ನ ನೈಸರ್ಗಿಕ ಚೆಲುವಿನಿಂದ ಪ್ರವಾಸಿಗರನ್ನು ಈಗಾಗಲೇ ಕೈಬೀಸಿ ಕರೆಯುತ್ತಿದ್ದು, ಜಿಲ್ಲೆಯನ್ನು ಪ್ರವಾಸೋದ್ಯಮ ತಾಣವಾಗಿಸಲು ಜನರಿಗೆ ಚಿರಪರಿಚಿತವಲ್ಲದ ಪಾರಂಪರಿಕ ಪ್ರದೇಶಗಳು, ಸಮುದ್ರ ತೀರಗಳು, ದ್ವೀಪ ಗಳನ್ನು ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಅಭಿವೃದ್ಧಿ ಪಡಿಸಿ ಪ್ರವಾಸಿ ಸ್ನೇಹಿಯನ್ನಾಗಿಸಲು ಜಿಲ್ಲಾಡಳಿತ ಮುಂದಾಗಿದೆ. ಈ ನಿಟ್ಟಿನಲ್ಲಿ ಸೆ.27 ರಂದು ಅನಾವರಣಗೊಳ್ಳುವ ಹಲವು ನಿಸರ್ಗ ರಮಣೀಯ ಪ್ರದೇಶಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.
ನೈಸರ್ಗಿಕ ಚೆಲುವು, ಹಿನ್ನೀರು, ನದಿ, ಸಮುದ್ರ, ದೇವಾಲಯಗಳ ನಾಡೆಂಬ ಖ್ಯಾತಿಯ ಉಡುಪಿಯಲ್ಲಿ, ಕಲ್ಯಾಣಪುರದ ಮೂಡಕುದ್ರುವಿನ ಸೀತಾನದಿ ಬಳಿ ಕಲ್ಪವೃಕ್ಷ ದ್ವೀಪವಿದೆ. ಇಲ್ಲಿಗೆ ತಲುಪಲು ತೂಗು ಸೇತುವೆಯನ್ನು ನಿರ್ಮಿಸಲಾಗಿದ್ದು, ಈ ತೂಗು ಸೇತುವೆ ದ್ವೀಪದ ಅಂದವನ್ನು ಹೆಚ್ಚಿಸಿದೆ.
ಪ್ರವಾಸೋದ್ಯಮ ಜಿಲ್ಲೆ ಸುಸ್ಥಿರ ಅಭಿವೃದ್ಧಿಗೆ ಪೂರವಾಗಿದ್ದು, ಪ್ರವಾಸೋದ್ಯಮ ದಿನದಂದು ಸ್ಥಳೀಯ ಅತ್ಯಾಕರ್ಷಕ ಪ್ರದೇಶಗಳನ್ನು ಪ್ರವಾಸಿಗರು ಹಾಗೂ ಜಿಲ್ಲೆಯ ಜನರು ಅನುಭವಿಸುವಂತಾಗಲು ಜಿಲ್ಲಾಡಳಿತ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಿದೆ.
ಬಹುಮಾನ ವಿತರಣೆ:ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಹಾಗೂ ಪ್ರವಾಸೋದ್ಯಮದ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ವಿವಿಧ ಸ್ಪರ್ಧೆಗಳಾದ ಚಿತ್ರಕಲಾ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು ಅವುಗಳ ವಿಜೇತರಿಗೆ ಸೆ.27ರಂದು ಬಹುಮಾನ ವಿತರಿಸಲಾಗುವುದು. ಅಲ್ಲದೇ ಉಡುಪಿ ಜಿಲ್ಲೆಗೆ ಹೆಚ್ಚು ಪರಿಚಯವಿಲ್ಲದ ಪ್ರವಾಸಿ ತಾಣಗಳು, ಉಡುಪಿಯ ಪ್ರವಾಸಿ ತಾಣಗಳ ಬಗ್ಗೆ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಇವುಗಳ ವಿಜೇತರಿಗೂ ಅಂದು ಬಹುಮಾನ ನೀಡಲಾಗುತ್ತದೆ.
ಸೆ.27ರಂದು ಸಂಜೆ 4:30ರಿಂದ 7:30ರವರೆಗೆ ಉಡುಪಿ ತಾಲೂಕಿನ ಮೂಡುಕುದ್ರು ಗ್ರಾಮದಲ್ಲಿ ಪ್ರವಾಸೋದ್ಯಮ ಜಾಗೃತಿ ಕುರಿತು ಗ್ರಾಮೀಣ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿದೆ.ಕಾರ್ಯಕ್ರಮಕ್ಕೆ ಬರುವ ಅತಿಥಿಗಳನ್ನು ಕಡವಿನ ಬಾಗಿಲಿನಿಂದ ದೋಣಿಗಳ ಮೂಲಕ ಮೂಡುಕುದ್ರುವಿಗೆ ಕರೆದೊಯ್ಯಲಾಗುವುದು.
ನಂತರ ಸ್ಥಳೀಯ ಸ್ವ ಸಹಾಯ ಸಂಘದ ಸದಸ್ಯರಿಂದ ಸಾಂಸ್ಕೃತಿಕ ನೃತ್ಯ, ಸ್ಥಳೀಯ ವಿಭಿನ್ನ ಖಾದ್ಯಗಳ ಪರಿಚಯ, ಆಕಾಶ ಬುಟ್ಟಿಗಳನ್ನು ತೇಲಿ ಬಿಡುವುದು, ಕ್ಯಾಂಪ್‌ಪೈರ್ ಮತ್ತು ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಅತಿಥಿಗಳಿಗೆ 300ರೂ.ಗಳ ಕೂಪನ್ ನಿಗದಿಪಡಿಸಿದ್ದು, ಇದರಿಂದ ಬರುವ ಮೊತ್ತವನ್ನು ಸ್ವಸಹಾಯ ಗುಂಪುಗಳ ಸ್ವಾವಲಂಬನೆಯ ಆದಾಯ ಮೂಲವನ್ನಾಗಿಸಿ, ಗ್ರಾಮೀಣ ಬದುಕಿನ ಪರಿಚಯದೊಂದಿಗೆ ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಿಂದ ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.







