ಪುತ್ತೂರು: `ಗುರುದೇವೋಭವ' ಕಾರ್ಯಕ್ರಮ ಉದ್ಘಾಟನೆ

ಪುತ್ತೂರು,ಸೆ.25: ಸರ್ಕಾರಿ ಶಾಲೆಗಳಿಗೆ ಎಲ್ಲಾ ಸೌಲಭ್ಯ ಸವಲತ್ತುಗಳಿದ್ದರೂ ಶಿಕ್ಷಕರ ಕೊರತೆಯಿಂದ ಬಳಲುತ್ತಿರುವುದು ನೋವಿನ ವಿಚಾರವಾಗಿದೆ. ಶಿಕ್ಷಕರ ಕೊರತೆಗೆ ಆಡಳಿತ ವ್ಯವಸ್ಥೆಯೇ ಕಾರಣವಾಗಿದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಎಸ್.ಜಿ. ಕೃಷ್ಣ ಹೇಳಿದರು.
ಅವರು ಸೋಮವಾರ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಸವಣೂರಿನಲ್ಲಿ ಶಾಲಾ ಶತಮಾನೋತ್ಸವ ಸಮಿತಿ ವತಿಯಿಂದ ಶಿಕ್ಷಕರ ಸಮಾವೇಶ `ಗುರುದೇವೋಭವ'ವನ್ನು ಉದ್ಘಾಟಿಸಿ ಮಾತನಾಡಿದರು.
ಗುರುಸ್ಮರಣೆಗೈದ ಶಿಕ್ಷಕ ಟಿ.ಎಸ್.ಆಚಾರ್ ಮಾತನಾಡಿ ಶಾಲಾ ಶಿಕ್ಷಕರು ನಿರಂತರವಾಗಿ ಅಧ್ಯಯನಶೀಲರಾಗಿರಬೇಕು. ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿಯಾಗಿರುವುದರಿಂದ ಶಿಕ್ಷಕರು ಮಾದರಿಯಾಗಿದ್ದು, ವೃತ್ತಿ ಗೌರವವನ್ನು ಉಳಿಸಿಕೊಂಡು ಕಾರ್ಯನಿರ್ವಹಿಸುವುದು ಅಗತ್ಯ ಎಂದು ಹೇಳಿದರು.
ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಕಾಂಞಗಾಡ್ ಜುಮಾ ಮಸೀದಿಯ ಮುದರ್ರಿಸ್ ಎಸ್.ಆರ್. ಅಬ್ದುಲ್ ಜಲೀಲ್ ಫೈಝಿ, ಬೇಲ್ಪಾಡಿ ಕುಂತೂರು ಜುಮಾ ಮಸೀದಿಯ ಖತೀಬ್ ಅಬ್ದುರ್ರಶೀದ್ ರಹ್ಮಾನಿ, ನಿವೃತ್ತ ಶಿಕ್ಷಕರಾದ ವಿಜಯಲಕ್ಷ್ಮೀ, ಮುತ್ತಣ್ಣ ರೈ, ರಾಮ ಭಟ್ ಕುಕ್ಕುಜೆ, ಹರಿನಾರಾಯಣ ಭಟ್ ಅನುಭವವನ್ನು ಹಂಚಿಕೊಂಡರು.
ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಕೆ. ಸೀತಾರಾಮ ರೈ ಸ್ವಾಗತಿಸಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ದಿನೇಶ್ ಮೆದು ಶತಮಾನೋತ್ಸವದ ಅಂಗವಾಗಿ ನಡೆಯುವ ಕಾಮಗಾರಿಗಳ ಕುರಿತು ವಿವರಿಸಿದರು. ಪಿ.ಡಿ ಗಂಗಾಧರ ರೈ ದೇವಸ್ಯ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಎಸ್‍ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಮೆದು, ಶಾಲಾ ಮುಖ್ಯಶಿಕ್ಷಕ ಹರಿಶಂಕರ್ ಭಟ್, ಸಿಆರ್‍ಪಿ ವೆಂಕಟೇಶ್ ಅನಂತಾಡಿ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷರಾದ ಶಿವರಾಮ ಗೌಡ ಮೆದು, ಮಹಮ್ಮದ್ ಕಣಿಮಜಲು ಉಪಸ್ಥಿತರಿದ್ದರು. ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ತಾರಾನಾಥ ಸವಣೂರು, ಶಿಕ್ಷಕ ಕುಶಾಲಪ್ಪ ಬರಮೇಲು ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ವಂದಿಸಿದರು.







