ಮಂಗಳೂರು ವಿವಿ ಮಟ್ಟದ ಕುಸ್ತಿ ಪಂದ್ಯಾಟಕ್ಕೆ ಚಾಲನೆ
ಉಡುಪಿ, ಸೆ.26: ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕಾಲೇಜಿನ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಮಂಗಳೂರು ವಿವಿ ಅಂತರ್ಕಾಲೇಜು ಮಟ್ಟದ ಪುರುಷರು ಮತ್ತು ಮಹಿಳೆಯರ ಕುಸ್ತಿ ಪಂದ್ಯಾಟಕ್ಕೆ ಇಂದು ಚಾಲನೆ ನೀಡಲಾಯಿತು.
ಪಂದ್ಯಾಟವನ್ನು ಉದ್ಘಾಟಿಸಿದ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಕುಸ್ತಿಯು ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯ ನೀಡುವ ಕ್ರೀಡೆಯಾಗಿದೆ. ಇಂದು ಜನರು ನಗರದಿಂದ ಹಳ್ಳಿಯ ಆಹಾರದತ್ತ ಆಕರ್ಷಿಸುವಂತೆ ಗ್ರಾಮೀಣ ಕ್ರೀಡೆಗಳತ್ತವೂ ಮುಖ ಮಾಡುವ ಕೆಲಸ ಆಗಬೇಕಾಗಿದೆ ಎಂದರು.
ಆಧುನಿಕ ತಂತ್ರಜ್ಞಾನದಿಂದಾಗಿ ಇಂದು ಮಕ್ಕಳು ಮೊಬೈಲ್ ಫೋನ್ಗಳ ಬಳಕೆಯ ದಾಸರಾಗುತ್ತಿದ್ದಾರೆ. ಇದರಿಂದ ಅವರ ಮಾನಸಿಕ ಆರೋಗ್ಯ ಕುಗ್ಗುತ್ತಿದೆ. ಈ ನಿಟ್ಟಿನಲ್ಲಿ ಇಂತಹ ಕ್ರೀಡೆಯಲ್ಲಿ ಮಕ್ಕಳು ಹೆಚ್ಚು ತೊಡಗಿಸಿಕೊಳ್ಳಬೇಕು. ಆದುದರಿಂದ ವಿಶ್ವವಿದ್ಯಾನಿಲಯಗಳು ಹಳ್ಳಿಯ ಕ್ರೀಡೆಗಳಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಅವರು ಹೇಳಿದರು.
ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ. ಮಾತನಾಡಿ, ಹಲವು ವರ್ಷಗಳ ಬಳಿಕ ಕುಸ್ತಿ ಪಂದ್ಯಾಟದಲ್ಲಿ 20ಕ್ಕೂ ಅಧಿಕ ತಂಡಗಳು ಭಾಗವಹಿಸುತ್ತಿರುವುದು. ಇದೇ ಕಾಲೇಜಿನಲ್ಲಿ ಈಗಾಗಲೇ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಶಿಬಿರವನ್ನು ಏರ್ಪಡಿಸಲಾಗಿದೆ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ ದ.ಕ. ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್, ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕ ಡಾ.ಶ್ರೀಕಾಂತ್ ಸಿದ್ಧಾಪುರ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ವಂದಿಸಿದರು. ಕನ್ನಡ ಉಪನ್ಯಾಸಕ ಶಿವ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.