ಪ್ರತ್ಯೇಕ ರಸ್ತೆ ಅಪಘಾತ: ನಾಲ್ವರು ಮೃತ್ಯು, ಓರ್ವನಿಗೆ ಗಾಯ
ಶಿವಮೊಗ್ಗ, ಸೆ. 26: ಜಿಲ್ಲೆಯ ಭದ್ರಾವತಿ, ಹೊಸನಗರ ಹಾಗೂ ಸಾಗರದಲ್ಲಿ ನಡೆದ ಮೂರು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ವಿವಾಹ ನಿಶ್ಚಿತಾರ್ಥವಾಗಿದ್ದ ಯುವಕ - ಯುವತಿ ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.
ಭದ್ರಾವತಿ: ಸಂಭವಿಸಿದ
ಬೈಕಿಗೆ ಟಿಪ್ಪರೊಂದು ಢಿಕ್ಕಿ ಹೊಡೆದ ಪರಿಣಾಮ ಯುವಕ,ಯುವತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣದ ಕಾಗದ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿ ನಗರದಲ್ಲಿ ನಡೆದಿದೆ.
ಮಹೇಶ್ (26) ಮತ್ತು ಗೀತಾ (19) ಮಥಪಟ್ಟವರೆಂದು ಗುರುತಿಸಲಾಗಿದೆ.
ಮಹೇಶ್ ಮತ್ತು ಗೀತಾ ಬೈಕ್‍ನಲ್ಲಿ ನಗರವನ್ನು ಸುತ್ತಾಡಿಕೊಂಡು ಬರಲು ಹೊರಟಿದ್ದಾಗ, ಎದುರಿನಿಂದ ಬಂದ ಟಿಪ್ಪರೊಂದು ಡಿಕ್ಕಿ ಹೊಡೆದಿದೆ. ಮಹೇಶ್ ರಾಮನಗರ ಜಿಲ್ಲೆಯವರಾಗಿದ್ದು, ಗೀತಾ ಭದ್ರಾವತಿ ಸಮೀಪದ ಮೊಸರಹಳ್ಳಿ ನಿವಾಸಿಯಾಗಿದ್ದಾರೆ. ಒಂದು ತಿಂಗಳ ಹಿಂದಷ್ಟೆ ಇವರ ವಿವಾಹ ನಿಶ್ಚಿತಾರ್ಥವಾಗಿತ್ತು ಎನ್ನಲಾಗಿದೆ.
ಹೊಸನಗರ: ರಸ್ತೆ ದಾಟುತ್ತಿದ್ದ ಸೈಕಲ್ ಸವಾರನಿಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟಿ ಘಟನೆ ತಾಲೂಕಿನ ರಿಪ್ಪನ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹಾಲುಗಡ್ಡೆ ಗ್ರಾಮದಲ್ಲಿ ನಡೆದಿದೆ.
ಸತ್ಯಪ್ಪ (50) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಜೀಪ್ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಗರ:
ಬೈಕ್ ಮತ್ತು ಸ್ಕೂಟಿ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದಪುರದ ಬಳಿ ನಡೆದಿದೆ.
ಆದಿತ್ಯ (17) ಸಾವಿಗೀಡಾದ ಬಾಲಕ ಎಂದು ಗುರುತಿಸಲಾಗಿದೆ.
ಮನೆಯಲ್ಲಿದ್ದ ಬೈಕ್‍ಗೆ ಪೆಟ್ರೋಲ್ ತರಲು ಈತ ಆನಂದಪುರಕ್ಕೆ ತೆರಳುತ್ತಿರುವಾಗ ಗೌರಿಕೆರೆ ಬಳಿ ಎದುರಿನಿಂದ ಬಂದ ಬೈಕ್ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.







