ಖ್ಯಾತ ಸ್ತ್ರೀರೋಗ ಹಾಗೂ ಹೆರಿಗೆ ತಜ್ಞೆ ಡಾ. ಮಾಲತಿ ಭಟ್ ನಿಧನ

ಮಂಗಳೂರು, ಸೆ. 26: ನಗರದ ಖ್ಯಾತ ಹಾಗೂ ಹಿರಿಯ ಸ್ತ್ರೀರೋಗ ತಜ್ಞೆ ಹಾಗೂ ಹೆರಿಗೆ ತಜ್ಞೆಯಾಗಿ ಗುರುತಿಸಿಕೊಂಡಿದ್ದ ಡಾ. ಮಾಲತಿ ಭಟ್ ಇಂದು ನಿಧನರಾಗಿದ್ದಾರೆ.
76ರ ಹರೆಯದ ಡಾ. ಮಾಲತಿ ಭಟ್ 1969ರಿಂದ ಹೆರಿಗೆ ತಜ್ಞೆಯಾಗಿ ಕಾರ್ಯನಿರ್ವಹಿಸಿದ್ದು, ಸುಮಾರು 50,000 ಕ್ಕೂ ಅಧಿಕ ಹೆರಿಗೆಗಳನ್ನು ಅವರು ನಿರ್ವಹಿಸಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ನಗರದ ಲೇಡಿಹಿಲ್‌ನ ಭಟ್ ನರ್ಸಿಂಗ್ ಹೋಂನಲ್ಲಿ ಹೆರಿಗೆ ನಡೆಸುತ್ತಿದ್ದ ಡಾ. ಮಾಲತಿ ಭಟ್‌ರವರ ಮೂವರು ಗಂಡು ಮಕ್ಕಳು ಹಾಗೂ ಸೊಸೆಯಂದಿರು ಕೂಡಾ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಹಿರಿಯ ಪುತ್ರ ಡಾ. ರಾಜೇಶ್ ಭಟ್ ಮತ್ತು ಸೊಸೆ ಡಾ. ವೀಣಾ ಭಟ್ ಭಟ್ ನರ್ಸಿಂಗ್ ಹೋಂನಲ್ಲಿ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರಾಗಿದ್ದು, ಎರಡನೆ ಮಗ ಡಾ. ಮಹೇಶ್ ಭಟ್ ಹಾಗೂ ಸೊಸೆ ಸುನೈನಾ ಭಟ್ ನಗರದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಮೂರನೆ ಮಗ ಡಾ. ಗಣೇಶ್ ಭಟ್ ಹಾಗೂ ಸೊಸೆ ಶ್ರುತಿ ದಂತ ವೈದ್ಯರಾಗಿದ್ದಾರೆ.
ಉರ್ವಾ ಮಾರಕುಟ್ಟೆ ಬಳಿ ನಿವಾಸಿ ಡಾ. ಮಾಲತಿ ಭಟ್‌ರವರ ಪತಿ ದಿವಂಗತ ತುಳಸಿದಾಸ್ ಭಟ್‌ರವರು ಕೂಡಾ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರಾಗಿ ಗುರುತಿಸಿಕೊಂಡಿದ್ದವರು.







