ಗೋವಾ: ಎರಡು ದೇವಾಲಯಗಳು, ಕನ್ನಡಿಗರ 55 ಮನೆಗಳು ನೆಲಸಮ

ಕಾರವಾರ, ಸೆ.26: ವಾಸ್ಕೋದ ಬೈನಾ ಕಡಲ ತೀರದ ಬಳಿ ಎರಡು ದೇವಾಲಯಗಳು ಸಹಿತ ವಾಸಿಸುತ್ತಿದ್ದ ಕನ್ನಡಿಗರ ಮನೆಗಳನ್ನು ಗೋವಾ ಸರಕಾರ ಜೆಸಿಬಿಗಳನ್ನು ಬಳಸಿ ನೆಲಸಮ ಮಾಡಿದ್ದು, ಕನ್ನಡಿಗರೀಗ ನಿರಾಶ್ರಿತರಾಗಿದ್ದಾರೆ.
ಕನ್ನಡಿಗರು ಅಕ್ರಮವಾಗಿ ವಾಸವಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗೋವಾದ ಮುರಗಾಂವ್ ನಗರಪಾಲಿಕೆಗೆ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಮಂಗಳವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಕಾರ್ಯಾಚರಣೆ ನಡೆಸಿತು.
ಕಾರ್ಯಾಚರಣೆಯ ವೇಳೆ ಎರಡು ದೇವಾಲಯಗಳು ಹಾಗೂ ಕನ್ನಡಿಗರ 55 ಮನೆಗಳು ಧರೆಗುರುಳಿವೆ. 45 ಪೊಲೀಸರ ತಂಡಗಳನ್ನು ರಚನೆ ಮಾಡಿ, ಸುಮಾರು ಏಳು ಜೆಸಿಬಿ ಯಂತ್ರಗಳ ಜೊತೆಗೆ ಮುನ್ಸಿಪಲ್ ಕಾರ್ಮಿಕರು ತೆರವು ಕಾರ್ಯಾಚರಣೆಯಲ್ಲಿದ್ದರು. ಗೋವಾ ಸರಕಾರ ಈ ಹಿಂದೆಯೇ ಅಲ್ಲಿನ ಕನ್ನಡಿಗರಿಗೆ ಮನೆಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿತ್ತು. ಆದರೆ, ಬೇರೆ ಆಶ್ರಯ ಇಲ್ಲದ ಕಾರಣಗಳಿಂದಾಗಿ ಕನ್ನಡಿಗರು ಬೈನಾ ಕಡಲ ತೀರದ ಬಳಿಯ ಮನೆಗಳನ್ನು ತೆರವು ಗೊಳಿಸಿರಲಿಲ್ಲ.
ಕಾರ್ಯಾಚರಣೆಯಲ್ಲಿ 8 ಪೊಲೀಸ್ ಇನ್‌ಸ್ಪೆಕ್ಟರ್‌ಗಳು, ಒಂದು ಡಿಎಸ್ಪಿ, 250ಕ್ಕೂ ಹೆಚ್ಚು ಪೊಲೀಸರು, ದಕ್ಷಿಣ ಗೋವಾದ ಪಿಎಸ್ಸೈ ಪೊಲೀಸ್ ಸಿಬ್ಬಂದಿ ಸಹಿತ ಮಹಿಳಾ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಸುಮಾರು 40 ವರ್ಷಗಳ ಹಿಂದೆ ಉತ್ತರ ಕರ್ನಾಟಕ ಭಾಗದ ಸಾವಿರಾರು ಸಂಖ್ಯೆಯ ಜನರು ಬದುಕು ಕಟ್ಟಿಕೊಳ್ಳಲು ಗೋವಾ ರಾಜ್ಯಕ್ಕೆ ವಲಸೆಹೋಗಿದ್ದರು. ಕನ್ನಡಿಗರು ವಾಸ್ಕೋದ ಬೈನಾ ಕಡಲತೀರದ ಬಳಿ ಮನೆ ನಿರ್ಮಿಸಿಕೊಂಡು ವಾಸ್ತವ್ಯ ಹೂಡಿದ್ದರು. ಹಿಂದಿನ ಗೋವಾ ಸರಕಾರ ಕನ್ನಡಿಗರಿಗೆ ಆಶ್ರಯ ನೀಡಿ ಪಡಿತರ ಚೀಟಿ, ಸೇರಿದಂತೆ ವಿವಿಧ ದಾಖಲೆಗಳ ಜೊತೆಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಮನೆ ನಂಬರ್ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ನೀಡಿತ್ತು.
ಕಳೆದ 2004ರಿಂದ ಸುಮಾರು 800ಕ್ಕೂ ಅಧಿಕ ಕನ್ನಡಿಗರ ಮನೆಗಳನ್ನು ಗೋವಾ ಸರಕಾರ ತೆರವು ಗೊಳಿಸಿದೆ. ಆದರೆ, ಈ ವರೆಗೆ ನಿರಾಶ್ರತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯಕ್ಕೆ ಗೋವಾ ಸರಕಾರ ಮುಂದಾಗಿಲ್ಲ.







