ವಿವಿ ಆಡಳಿತದ ವೈಫಲ್ಯ: ವರದಿಯಲ್ಲಿ ಉಲ್ಲೇಖ
ಬಿಎಚ್‌ಯು ಹಿಂಸಾಚಾರ ಪ್ರಕರಣ

ಹೊಸದಿಲ್ಲಿ, ಸೆ.26: ಬನಾರಸ್ ಹಿಂದು ವಿವಿಯಲ್ಲಿ ನಡೆದ ಅಹಿತಕರ ಘಟನೆಯನ್ನು ಸೂಕ್ತವಾಗಿ ನಿಭಾಯಿಸುವಲ್ಲಿ ವಿವಿ ಆಡಳಿತ ವರ್ಗ ವಿಫಲವಾಗಿದ್ದು ಸಂತ್ರಸ್ತರು ಸಲ್ಲಿಸಿದ್ದ ದೂರಿನ ಕುರಿತು ಸಕಾಲಿಕ ಕ್ರಮ ಕೈಗೊಳ್ಳಲಿಲ್ಲ ಎಂದು ವಾರಣಾಸಿ ಜಿಲ್ಲಾಧಿಕಾರಿ ನಿತಿನ್ ಗೋಕರ್ಣ್ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.
ಪೊಲೀಸರ ಮೇಲೆ ಹಲ್ಲೆ ನಡೆಸಿದ ಹಾಗೂ ಹಿಂಸಾಚಾರದಲ್ಲಿ ತೊಡಗಿದ ಆರೋಪದಲ್ಲಿ 1,000 ಗುರುತು ಪತ್ತೆಯಾಗದ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಮರುದಿನ ನಿತಿನ್ ಸರಕಾರದ ಮುಖ್ಯಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದಾರೆ.
ವಾರಣಾಸಿ ಜಿಲ್ಲಾಡಳಿತವೂ ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಈ ಮಧ್ಯೆ, ‘ಬಾಹ್ಯ ಶಕ್ತಿಗಳ’ ಕೈವಾಡ ಇದೆ ಎಂದು ಬಿಎಚ್‌ಯು ವಿವಿಯ ಉಪಕುಲಪತಿ ಗಿರೀಶ್‌ಚಂದ್ರ ತ್ರಿಪಾಠಿ ದೂರಿದ್ದಾರೆ. ವದಂತಿಗಳನ್ನು ಹಬ್ಬುವ ಮೂಲಕ ಪ್ರತಿಭಟನೆಯ ಬೆಂಕಿಗೆ ತುಪ್ಪ ಸುರಿಯಲಾಗಿದೆ . ಪ್ರಧಾನಿ ಮೋದಿ ವಿವಿಗೆ ಭೇಟಿ ನೀಡುವ ಸಂದರ್ಭದಲ್ಲೇ ಉದ್ದೇಶಪೂರ್ವಕವಾಗಿ ಈ ಕಿಡಿಗೇಡಿ ಕೃತ್ಯ ನಡೆಸಲಾಗಿದೆ ಎಂದು ತ್ರಿಪಾಠಿ ಹೇಳಿದ್ದಾರೆ.





