ಆಲಿಗರ್ ಮುಸ್ಲಿಂ ವಿವಿ ಮಾಜಿ ವಿದ್ಯಾರ್ಥಿ ಮುಖಂಡನ ಮೇಲೆ ಗುಂಡಿನ ದಾಳಿ

ಲಕ್ನೊ, ಸೆ.26: ಆಲಿಗರ್ ಮುಸ್ಲಿಂ ವಿವಿ(ಅಮು) ವಿದ್ಯಾರ್ಥಿ ಸಂಘಟನೆಯ ಮಾಜಿ ಉಪಾಧ್ಯಕ್ಷ ನದೀಮ್ ಅನ್ಸಾರಿ ಮೇಲೆ ಇಬ್ಬರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ ಬಳಿಕ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.
ತೀವ್ರ ಗಾಯಗೊಂಡಿರುವ ಅನ್ಸಾರಿಯನ್ನು ಜವಾಹರ್‌ಲಾಲ್ ನೆಹರು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಎಎಂಯು (ಅಮು) ವಿವಿಯ ಆವರಣದ ಸಮೀಪ ಇರುವ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಘಟನೆ ಸಂಭವಿಸಿದೆ. ದ್ವಿಚಕ್ರ ವಾಹನವೊಂದರಲ್ಲಿ ಮನೆಯತ್ತ ಬರುತ್ತಿದ್ದ ಅನ್ಸಾರಿಯನ್ನು ಅಡ್ಡಗಟ್ಟಿದ ಇಬ್ಬರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳು ಹಾರಿಸಿದ ಗುಂಡು ಅನ್ಸಾರಿಯ ಭುಜದ ಮೂಲಕ ತೂರಿ ಹೋಗಿದೆ. ನಂತರ ದುಷ್ಕರ್ಮಿಗಳು ಚೂರಿಯಿಂದ ದಾಳಿ ನಡೆಸಿದಾಗ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಅನ್ಸಾರಿಯನ್ನು ರಕ್ಷಿಸಿದ್ದಾರೆ ಎಂದು ವಿವಿಯ ಪ್ರೊಫೆಸರ್ ಮೊಹ್ಸಿನ್ ಖಾನ್ ಪೊಲೀಸರಿಗೆ ತಿಳಿಸಿದ್ದಾರೆ. ವಿವಿಯ ಇಬ್ಬರು ಮಾಜಿ ವಿದ್ಯಾರ್ಥಿಗಳಾದ ಸಲ್ಮಾನ್ ಹಾಗೂ ಅರ್ಮಾನ್ ಹಲ್ಲೆ ನಡೆಸಿರುವುದಾಗಿ ಅನ್ಸಾರಿ ಮಾಹಿತಿ ನೀಡಿದ್ದಾರೆ ಎಂದು ಖಾನ್ ತಿಳಿಸಿದ್ದಾರೆ.





