ಭಾರತಕ್ಕೆ ಬುಲೆಟ್ ರೈಲು ಬೇಕಿಲ್ಲ ಹಸಿದ ಹೊಟ್ಟೆಗಳಿಗೆ ಅನ್ನ ಬೇಕು: ಸಾಹಿತಿ ಕೆ.ನೀಲಾ

ಮೈಸೂರು, ಸೆ.26: ಭಾರತಕ್ಕೆ ಬುಲೆಟ್ ರೈಲುಗಳು ಬೇಕಿಲ್ಲ. ಹಸಿದ ಹೊಟ್ಟೆಗಳಿಗೆ ಅನ್ನಬೇಕು. ತೆರಿಗೆ ಕದಿಯಲು ಅವಕಾಶ ಇಲ್ಲದ ವ್ಯವಸ್ಥೆ ಜಾರಿಯಾಗಬೇಕು ಎಂದು ಸಾಹಿತಿ, ಹೋರಾಟಗಾರ್ತಿ ಕೆ.ನೀಲಾ ಹೇಳಿದ್ದಾರೆ.
ವಿಶಿಷ್ಟ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೂ, ಮುಸ್ಲಿಮ್, ಸಿಖ್ ಹಾಗೂ ಜೈನರು ಸೇರಿದಂತೆ ಎಲ್ಲ ಸಮುದಾಯಗಳು ಯಾವುದೇ ಭೇದವಿಲ್ಲದೆ ಬದುಕುತ್ತಿರುವ ದೊಡ್ಡ ಸಾಂಸ್ಕೃತಿಕ ಪರಂಪರೆ ನಮ್ಮದು. ಆದರೆ, ಬೀದಿಯಲ್ಲಿ ಬಂದೂಕಿನ ಮೂಲಕ ರಕ್ತ ಚೆಲ್ಲಾಡುತ್ತಿದೆ. ಹಣೆಗೆ ಗುಂಡಿಡಬಹುದು. ಆದರೆ, ನುಡಿಗೆ ಗುಂಡು ಇಡಲಾಗದು. ಪ್ರಭುತ್ವ ಹಿಂಸೆಯ ಜತೆಗೆ ನಿಲ್ಲಬಾರದು ಎಂದರು.
ಒಂದು ಭಾರತ ಅಲ್ಲ: ಇದು ಒಂದು ಭಾರತ ಅಲ್ಲ. ಏಕ ಸಂಸ್ಕೃತಿ, ಏಕ ಬಾವುಟ ಇಂತಹ ಏಕಗಳ ಹೇರುವಿಕೆಯನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದು ಗುಡುಗಿದರು.
ದಿಲ್ ಕಿ ಬಾತ್: ಇವತ್ತು ಅಲಕ್ಷಿತರು, ದಮನಿತರು, ತೃತೀಯ ಲಿಂಗಿಗಳು ಇಲ್ಲಿ ವಾಚಿಸಿದ ಕವನಗಳು ಹೃದಯದ ಮಾತುಗಳು. ಕೇಳುಗರ ಹೃದಯಕ್ಕೆ ಇಳಿದಿವೆ. ಅಂದರೆ ಇವು ಮನ್ ಕಿ ಬಾತ್ ಅಲ್ಲ, ದಿಲ್ ಕಿ ಬಾತ್. ಕಾವ್ಯ ಕ್ರಾಂತಿಯ ತಾಯಿ ಆಗುವ ದಿಕ್ಕಿನಲ್ಲಿ ಹೊರಳಿದೆ. ಎಲ್ಲರೂ ಮಾತನಾಡುವ ಅಗತ್ಯವಿದೆ. ಮೌನ ಮುರಿಯವ ಕಾವ್ಯ ಬೇಕಿದೆ ಎಂದು ನೀಲಾ ತಿಳಿಸಿದರು.







