ಚುನಾವಣಾ ಕಣಕ್ಕೆ ಕನ್ನಡದ ಕಟ್ಟಾಳುಗಳು: ವಾಟಾಳ್ ನಾಗರಾಜ್
ಬೆಂಗಳೂರು, ಸೆ.26: ರಾಜ್ಯದಲ್ಲಿ ನಡೆಯುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನ್ನಡದ ಕಟ್ಟಾಳುಗಳು ಸ್ಪರ್ಧಿಸಲಿದ್ದಾರೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಮಂಗಳವಾರ ನಗರದ ಪುರಭವನದಲ್ಲಿ ವಾಟಾಳ್ ನಾಗರಾಜ್ ಜನ್ಮದಿನ ಅಂಗವಾಗಿ ಅವರ ಅಭಿಮಾನಿಗಳ ಸಂಘ ಹಮ್ಮಿಕೊಂಡಿದ್ದ ‘ಬೂಟ್ಸು ಏಟು’ ವಿಶೇಷ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಚುನಾವಣೆ ಮಹಾಯುದ್ಧದ ಕಾಲವಾಗಿದ್ದು, ರಾಜ್ಯದ ಜನತೆ ನೂರು ಜನ ಕನ್ನಡ ಕಟ್ಟಾಳುಗಳನ್ನು ವಿಧಾನಸಭೆಗೆ ಆಯ್ಕೆ ಮಾಡುವ ಮೂಲಕ ವಿಧಾನಸೌಧದ ಮೇಲೆ ಕನ್ನಡ ಬಾವುಟ ಹಾರಿಸಬೇಕು ಎಂದರು.
1962ರಿಂದ ಇಲ್ಲಿಯವರೆಗೆ ಕನ್ನಡ ಹೋರಾಟವನ್ನು ತಪಸ್ಸಿನಂತೆ ಮಾಡಿಕೊಂಡು ಬಂದಿದ್ದೇನೆ. ಕನ್ನಡ ಕಟ್ಟಾಳುಗಳ ಸರಕಾರ ರೂಪಗೊಳ್ಳಬೇಕು ಎಂದು ಕನಸು ಕಾಣುತ್ತಿದ್ದೇನೆ. ಈ ಹೋರಾಟ ಬಿಟ್ಟು ಬೇರೆ ರಾಜಕೀಯ ಪಕ್ಷ ಸೇರಿದ್ದರೆ ಮುಖ್ಯಮಂತ್ರಿ ಆಗಬಹುದಿತ್ತು ಎಂದ ಅವರು, ತಮ್ಮ ಹೋರಾಟ ಸಾರ್ಥಕಗೊಳ್ಳಲು ಜನರು ನೂರು ಜನರನ್ನು ಗೆಲ್ಲಿಸಲೇಬೇಕು ಎಂದು ತಿಳಿಸಿದರು.
ನ.2 ಹೋರಾಟ: ಕನ್ನಡ ಕಟ್ಟಾಳುಗಳನ್ನು ಗೆಲ್ಲಿಸಲು ಕರ್ನಾಟಕ ಪ್ರಜಾ ಸಂಯುಕ್ತ ರಂಗ ನಿರ್ಮಾಣ ಮಾಡುವ ಉದ್ದೇಶವಿದೆ. ಕನ್ನಡ ಒಕ್ಕೂಟವು ಕಂಡಿರುವ ರಾಜ್ಯದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸುವ ಕನಸಿನಂತೆ ನ.2ರಿಂದ ಬೀದರ್ ಜಿಲ್ಲೆಯಲ್ಲೇ ಹೋರಾಟವನ್ನು ಆರಂಭಿಸಿ ಇಡೀ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಹೊಸ ಶಕ್ತಿ ಉಂಟಾಗಲು ಶ್ರಮಿಸುವುದಾಗಿ ಅವರು ಹೇಳಿದರು.
ಕನ್ನಡ ನಾಡು-ನುಡಿ ಅಭ್ಯುದಯಕ್ಕಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಯಾವುದೇ ಕಾಳಜಿ ಇಲ್ಲ. ಕನ್ನಡ ಒಕ್ಕೂಟ ಮಾತ್ರ ಕನ್ನಡ, ಕಾವೇರಿ, ಉತ್ತರ ಕರ್ನಾಟಕ ಬಯಲುಸೀಮೆ ನೀರಿನ ಸಮಸ್ಯೆಗಳಿಗೆ ಗಂಭೀರ ಹೋರಾಟ ನಡೆಸಿಕೊಂಡು ಬಂದಿದೆ. ಮೈಯಲ್ಲಿ ಕೊನೆಯ ರಕ್ತ ಇರುವವರೆಗೂ ಕನ್ನಡಕ್ಕಾಗಿ ಹೋರಾಡುವುದಾಗಿಯೂ ನುಡಿದರು.
ವಿಶೇಷ ಆಚರಣೆ: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು 1962ರಲ್ಲಿ ನಗರದಲ್ಲಿದ್ದ ಅಲಂಕಾರ್ ಚಿತ್ರಮಂದಿರದಲ್ಲಿ ಹಿಂದಿ ಚಿತ್ರವನ್ನು ತೆಗೆಯುವಂತೆ ನಡೆಸಿದ್ದ ಕನ್ನಡ ಪರ ಹೋರಾಟ ಸಂದರ್ಭದಲ್ಲಿ ಹೋರಾಟ ತೀವ್ರ ಸ್ವರೂಪವನ್ನು ಪಡೆದಿತ್ತು. ಬಳಿಕ ಉಪ್ಪಾರಪೇಟೆ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ಬಂಧಿಸಿದ್ದರು. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಅವರಿಗೆ ಕನ್ನಡಪರ ಹೋರಾಟ ನಡೆಸಿದ್ದಕ್ಕಾಗಿ ಬೂಟ್ಸ್ ತೆಗೆದು ಹೊಡೆದಿದ್ದರು. ಈ ಸಂಬಂಧ ಆಗಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಶಾಸನ ಸಭೆಯಲ್ಲಿ ಈ ರೀತಿ ಹೊಡೆದಿದ್ದು ತಪ್ಪಾಯಿತು ಎಂದಿದ್ದರು. ಅದೇ ದಿನವನ್ನೆ ವಾಟಾಳ್ ಅವರ ಹುಟ್ಟುಹಬ್ಬವಾಗಿ ಅಭಿಮಾನಿಗಳು ಆಚರಿಸಿಕೊಂಡು ಬಂದಿದ್ದಾರೆ. ಇಂದು ಕೆ.ಆರ್.ಮಾರುಕಟ್ಟೆಯಿಂದ ಮಂಗಳವಾದ್ಯ, ಬೊಂಬೆ ಕುಣಿತದ ಮೆರವಣಿಗೆಯೊಂದಿಗೆ ವಾಟಾಳ್ ನಾಗರಾಜ್ ಅವರನ್ನು ಬೆಳ್ಳಿರಥ ವಾಹನದ ಮೂಲಕ ಪುರಭವನಕ್ಕೆ ಕರೆತರಲಾಯಿತು.
ಕಾರ್ಯಕ್ರಮದಲ್ಲಿ ವಾಟಾಳ್ ನಾಗರಾಜ್ ಪುತ್ರಿ ಅನುಪಮಾ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆ ಮುಖಂಡರಾದ ಗಿರೀಶ್‌ಗೌಡ, ಕುಮಾರ್ ಸೇರಿ ಪ್ರಮುಖರಿದ್ದರು.







