ಶೀಘ್ರದಲ್ಲೇ ನೂತನ ಕ್ರೀಡಾ ನೀತಿ: ಸಚಿವ ಪ್ರಮೋದ್ ಮಧ್ವರಾಜ್
ಬೆಂಗಳೂರು, ಸೆ. 26: ಶೀಘ್ರದಲ್ಲಿ ಹಣಕಾಸು ಇಲಾಖೆಯ ಒಪ್ಪಿಗೆ ಪಡೆದು ನೂತನ ಕ್ರೀಡಾ ನೀತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯ ನಾಲ್ಕು ವರ್ಷಗಳ ಸಾಧನೆಯ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈಗಾಗಲೇ ಹಣಕಾಸು ಇಲಾಖೆಯ ಒಪ್ಪಿಗೆಗೆ ಕಳುಹಿಸಿದ್ದ ಕ್ರೀಡಾ ನೀತಿಯ ಕರಡು ಪ್ರತಿಯನ್ನು ವಾಪಸ್ ಕಳುಹಿಸಿದೆ. ಮೂರು ವರ್ಷಕ್ಕೆ 2 ಸಾವಿರ ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಹೀಗಾಗಿ ಕರಡಿನಲ್ಲಿರುವ ಕೆಲ ನೀತಿಗಳನ್ನು ಸರಳೀಕೃತಗೊಳಿಸಲು ಹಣಕಾಸು ಇಲಾಖೆ ಸೂಚಿಸಿದೆ. ಸದ್ಯದಲ್ಲೇ ಕರಡನ್ನು ಸರಳೀಕರಣಗೊಳಿಸಿ ಹಣಕಾಸು ಇಲಾಖೆಯ ಒಪ್ಪಿಗೆ ಪಡೆದು ಹೊಸ ಕ್ರೀಡಾ ನೀತಿಗೆ ಮುಂದಿನ ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೊರತೆ ಇರುವ 100 ಕ್ರೀಡಾ ತರಬೇತಿದಾರರ ನೇಮಕಾತಿ ಪ್ರಕ್ರಿಯೆಗೆ ಕೂಡಲೇ ಅಧಿಸೂಚನೆ ಹೊರಡಿಸಲಾಗುವುದು. ಜೊತೆಗೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ತರಬೇತಿದಾರರಿಗೆ ವೇತನವನ್ನು 26 ಸಾವಿರದಿಂದ 35 ಸಾವಿರ ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದರು.
ಪ್ರಶಸ್ತಿ ವಿಜೇತರಿಗೆ ಸರಕಾರಿ ನೌಕರಿ: ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಪ್ರಶಸ್ತಿ ಗಳಿಸುವ ರಾಜ್ಯದ ಕ್ರೀಡಾಪಟುಗಳಿಗೆ ಸರಕಾರಿ ಉದ್ಯೋಗ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಒಲಿಂಪಿಕ್ ಪದಕ ವಿಜೇತರಿಗೆ ಗ್ರೂಪ್ ‘ಎ’ ಹುದ್ದೆ, ಏಷ್ಯನ್ ಮತ್ತು ಕಾಮನ್‌ವೆಲ್ತ್ ಕ್ರೀಡೆಗಳ ಪದಕ ವಿಜೇತರಿಗೆ ಗ್ರೂಪ್ ‘ಬಿ’ ಹುದ್ದೆಗಳನ್ನು ನೀಡಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.
ಸಹಸ್ರ ಕ್ರೀಡಾ ಪ್ರತಿಭಾ ಯೋಜನೆ ಜಾರಿ: ರಾಜ್ಯದಲ್ಲಿನ ಪ್ರತಿಭಾ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸಹಸ್ರ ಕ್ರೀಡಾ ಪ್ರತಿಭಾ ಯೋಜನೆಯನ್ನು ಈ ವರ್ಷದಿಂದ ಅನುಷ್ಠಾನಗೊಳಿಸಲಾಗುವುದು ಕ್ರೀಡಾಪಟುಗಳ ಸಂಪೂರ್ಣ ವಿವರ, ಕ್ರೀಡಾ ಸಾಧನೆಯ ಮಾಹಿತಿ ಕ್ರೀಡಾ ಇಲಾಖೆಯ ಆಡಳಿತದ ವ್ಯವಹಾರಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗುವುದು. ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಹಾಗೂ ಉಡುಪಿಯಲ್ಲಿ ತಲಾ ಎರಡು ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರಗಳನ್ನು ಆರಂಭಿಸಲಾಗುವುದು. ಈ ಕೇಂದ್ರಗಳಲ್ಲಿ ಕ್ರೀಡಾ ಮ್ಯೂಟ್ರೀಷಿಯನ್, ಸೈಕಾಲಜಿ, ಔಷಧ, ಫಿಜಿಯೋಥೆರಪಿ ಮತ್ತಿತರ ಸೌಲಭ್ಯಗಳು ಲಭ್ಯವಾಗಲಿವೆ ಎಂದರು.
ಮೀನುಗಾರಿಕೆ ಇಲಾಖೆಯ ಆಡಳಿತದಲ್ಲಿ ಪಾರದರ್ಶಕತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. 2016-17ನೆ ಸಾಲಿನಲ್ಲಿ ಮತ್ಸಾಶ್ರಯ ಯೋಜನೆಯಡಿ ಮೀನುಗಾರರಿಗೆ ಮೂರು ಸಾವಿರ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಡಿಸೇಲ್ ದೋಣಿಗಳ ಬದಲಾಗಿ ಯಾಂತ್ರಿಕೃತ ದೋಣಿಗಳನ್ನು ರಿಯಾಯಿತಿ ದರದಲ್ಲಿ ಮೀನುಗಾರರಿಗೆ ವಿತರಿಸಲಾಗಿದೆ ಎಂದರು.
ಕಡಲ ತೀರದ 12 ನಾಟಿಕಲ್ ಮೈಲ್‌ವರೆಗೆ ಬುಲ್ ಟ್ರಾಲಿಂಗ್ ಹಾಗೂ ಬೆಳಕು ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಬಾಗಲಕೋಟೆಯಲ್ಲಿ 2 ಕೊಟಿ ರೂ. ವೆಚ್ಚದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.
ಕೃಷಿ ಭೂಮಿಯಲ್ಲಿ ಮೀನುಗಾರಿಕೆ ಪ್ರೋತ್ಸಾಹ: ಒಳನಾಡು ಮೀನುಗಾರಿಕೆಯನ್ನು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗಿದೆ. ಒಳನಾಡ ಮೀನುಗಾರಿಕೆ ಯೋಜನೆಯಡಿ ಕೃಷಿ ಭೂಮಿಯಲ್ಲಿ ಮೀನು ಸಾಕಾಣೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಸ್ವಂತ ಭೂಮಿಯಲ್ಲಿ ನಡೆಸುವ ಮೀನುಗಾರಿಕೆಗೆ ತಗಲುವ ವೆಚ್ಚದಲ್ಲಿ ಶೇ. 50ರಷ್ಟು ಹಣವನ್ನು ಇಲಾಖೆ ಭರಿಸಲಿದೆ ಎಂದು ತಿಳಿಸಿದರು.







