ಎಸ್ಸಿ ವಿದ್ಯಾರ್ಥಿಗಳಿಗೆ ಪರ್ವತಾರೋಹಣ ತರಬೇತಿ
ತರಬೇತಿ ತಂಡಕ್ಕೆ ಸಿಎಂ ಸಿದ್ದರಾಮಯ್ಯರಿಂದ ಬೀಳ್ಕೊಡುಗೆ
ಬೆಂಗಳೂರು, ಸೆ. 26: ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿಯ ಬಾಲಕ-ಬಾಲಕಿಯರಿಗೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಪರ್ವತಾರೋಹಣ ಸಂಸ್ಥೆಯಲ್ಲಿ ಪರ್ವತಾರೋಹಣ ಉಚಿತ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ರಾಷ್ಟ್ರಮಟ್ಟದಲ್ಲಿ ಪರ್ವತಾರೋಹಣ ತರಬೇತಿಯಲ್ಲಿ ಖ್ಯಾತಿ ಪಡೆದಿರುವ ಈ ಪ್ರತಿಷ್ಠಿತ ಸಂಸ್ಥೆಯಲ್ಲಿ 30 ಮಂದಿ ಬಾಲಕಿಯರು ಹಾಗೂ 30 ಬಾಲಕರನ್ನು 15 ದಿನಗಳ ತರಬೇತಿ ನೀಡುತ್ತಿದ್ದು, ಸೆ.27ರ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಬೀಳ್ಕೊಡಲಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯು ರಾಜ್ಯಾದ್ಯಂತ 636 ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳನ್ನು ನಿರ್ವಹಿಸುತ್ತಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಭೋಜನಾ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕಾಲೇಜುಗಳ ಶುಲ್ಕ ಹಾಗೂ ನಿರ್ವಹಣಾ ಭತ್ಯೆಯನ್ನೂ ಪಾವತಿಸಲಾಗುತ್ತದೆ.
ಈ ವಿದ್ಯಾರ್ಥಿಗಳಲ್ಲಿ ಬಹುತೇಕರು ಗ್ರಾಮೀಣ ಪ್ರದೇಶಗಳಿಗೆ ಸೇರಿದವರಾಗಿದ್ದು, ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿ ಅವರ ಸರ್ವಾಂಗೀಣ ಬೆಳವಣಿಗೆಗೆ ಪ್ರೋತ್ಸಾಹಿಸಲು ಪರ್ವತಾರೋಹಣಾ ತರಬೇತಿ ಕೊಡಿಸಲಾಗುತ್ತಿದೆ.
2017-18ನೆ ಸಾಲಿನಲ್ಲಿ ಏರ್ಪಡಿಸುತ್ತಿರುವ ಈ ತರಬೇತಿ ಶಿಬಿರದಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿಶ್ಲೇಷಣಾತ್ಮಕ ಚಿಂತನೆ, ನಾಯಕತ್ವದ ಕೌಶಲ್ಯಗಳು, ದೈಹಿಕ ಸದೃಢತೆ, ಕಾರ್ಯತಂತ್ರದ ಚಿಂತನೆ ಹಾಗೂ ಸಾಹಸ ಪ್ರವೃತ್ತಿಯನ್ನು ಪ್ರೋತ್ಸಾಹಿಸಲಾಗುತ್ತಿದೆ.
ಹೊಸದಿಲ್ಲಿಯ ಇಂಡಿಯನ್ ಮೌಂಟೇನೇರಿಂಗ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ 5 ಪ್ರಮುಖ ಪರ್ವತಾರೋಹಣಾ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಒಂದಾದ ಮನಾಲಿಯ ಅಟಲ್ ಬಿಹಾರಿ ವಾಜಪೇಯಿ ಪರ್ವತಾರೋಹಣಾ ಸಂಸ್ಥೆಯ ಮೂಲಕ ತರಬೇತಿಯನ್ನು ಯುವಜನಸೇವೆ ಹಾಗೂ ಸಬಲೀಕರಣ ಇಲಾಖೆಯ ಸಲಹೆಗಾರರ ಸೂಚನೆ ಮೇರೆಗೆ ಏರ್ಪಡಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯು ಪ್ರಥಮ ಭಾರಿಗೆ ಪರಿಶಿಷ್ಟ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಈ ತರಬೇತಿ ವ್ಯವಸ್ಥೆ ಮಾಡಿದ್ದು, ಹೋಗಿ-ಬರುವ ಪ್ರಯಾಣದ ದಿನವೂ ಸೇರಿದಂತೆ ಸೆಪ್ಟಂಬರ್ 28ರಿಂದ ಅಕ್ಟೋಬರ್ 12ರ ವರೆಗೆ 15 ದಿಗಳ ಕಾಲ ಉಚಿತ ತರಬೇತಿ ಸಿಗಲಿದೆ.
ಟ್ರೆಕ್ಕಿಂಗ್, ಕ್ಯಾಂಪಿಂಗ್, ರಾಕ್ ಕ್ಲೈಂಬಿಂಗ್, ರಾಕ್ ಕ್ರಾಫ್ಟ್, ರಿವರ್ ಕ್ರಾಸಿಂಗ್ ಮತ್ತಿತರ ತರಬೇತಿಯನ್ನು ನುರಿತ ಪರ್ವತಾರೋಹಿಗಳಿಂದ ಕೊಡಿಸಲಾಗುವುದು. ಈ ತರಬೇತಿಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ 200 ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪೈಕಿ ಆಯ್ಕೆಯಾದ 155 ಬಾಲಕ, 44 ಬಾಲಕಿಯರಿಗೆ ರ್ಯಾಂಕ್ ನೀಡಲಾಗಿತ್ತು. ಇವರ ಪೈಕಿ ಮೊದಲಿನ 30ರ್ಯಾಂಕ್ ಪಡೆದ ಬಾಲಕ-ಬಾಲಕಿಯರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.







