ಪೌರ ಕಾರ್ಮಿಕರಿಗೆ ಆದ್ಯತೆ ಮೇರೆಗೆ ನಿವೇಶನ ನೀಡಿಲು ಕ್ರಮ ಕೈಗೊಳ್ಳಬೇಕು: ಈಶ್ವರ ಬಿ.ಖಂಡ್ರೆ

ಚಿಕ್ಕಮಗಳೂರು, ಸೆ.26: ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು ನಿವೇಶನ ಇಲ್ಲದಿದ್ದರೆ ಅಂತಹ ಪೌರ ಕಾರ್ಮಿಕರಿಗೆ ಆದ್ಯತೆ ಮೇಲೆ ನಿವೇಶನ ಕೊಡಲು ಅವಕಾಶವಿದ್ದು, ಕ್ರಮ ಕೈಗೊಳ್ಳಬೇಕು ಎಂದು ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಈಶ್ವರ ಬಿ.ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ನಗರದ ಜಿಪಂ ಸಭಾಂಗಣದಲ್ಲಿ ನಡೆದ ಪೌರಾಡಳಿತ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತೀ ಮಾಹೆ 2ನೆ ತಾರೀಕಿನೊಳಗೆ ವೇತನ ನೀಡಬೇಕು, ಇಎಸ್‍ಐ, ಪಿಎಫ್ ಅನ್ನು ಸರಿಯಾಗಿ ಅವರ ಖಾತೆಗೆ ಜಮೆ ಅಗುತ್ತಿರುವುದರ ಕುರಿತು ಪರಿಶೀಲಿಸಬೇಕು ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ತಿಳಿಸಿದರು.
ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ ಅಂತ್ಯದ ಒಳಗೆ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‍ಗಳಲ್ಲಿ ಶೌಚಾಲಯ ನಿರ್ಮಾಣ ಪೂರ್ಣಗೊಳಿಸಬೇಕು. ಅ.2 ಕ್ಕೆ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಘೋಷಿಸುವ ಸಂಬಂಧ ಶೌಚಾಲಯಗಳ ನಿರ್ಮಾಣ ಪೂರ್ಣಗೊಳ್ಳದ ನಗರಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವಂತೆ ಜನರ ಮನವೋಲಿಸಬೇಕು ಎಂದರು.
ಚಿಕ್ಕಮಗಳೂರು ನಗರದಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ 591 ಅರ್ಜಿಗಳು ಬಂದಿದ್ದು ಸರ್ವೇಯಲ್ಲಿ 240 ಜನರು ನಗರವನ್ನು ಬಿಟ್ಟಿರುತ್ತಾರೆ, 216 ಶೌಚಾಲಯಗಳು ಪೂರ್ಣಗೊಂಡಿದ್ದು 138 ಪ್ರಗತಿಯಲ್ಲಿವೆ. 100 ಅರ್ಜಿಗಳು ತಿರಸ್ಕೃತಗೊಂಡಿವೆ, 30 ಮನೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಜಾಗ ಇಲ್ಲ ಈ 30 ಮನೆಗಳಿಗೆ ಸಾಮೂಹಿಕ ಶೌಚಾಲಯ ನಿರ್ಮಿಸಲು ಕೂಡ ಸ್ಥಳವಿಲ್ಲ ಎಂದು ನಗರಸಭೆ ಆಯುಕ್ತರು ಸಭೆಗೆ ಮಾಹಿತಿ ನೀಡಿದರು.
ಶೌಚಾಲಯ ನಿರ್ಮಾಣಕ್ಕಾಗಿ ಶೃಂಗೇರಿಯಲ್ಲಿ 7 ಅರ್ಜಿಗಳು ಬಂದಿದ್ದು 7 ಶೌಚಾಲಯಗಳು ಪೂರ್ಣಗೊಂಡಿವೆ. ಮೂಡಿಗೆರೆಯಲ್ಲಿ 11 ಅರ್ಜಿಗಳಲ್ಲಿ 11 ಶೌಚಾಲಯಗಳನ್ನು ನಿರ್ಮಿಸಲಾಗಿದೆ, ಕೊಪ್ಪ 18 ಅರ್ಜಿಗಳಲ್ಲಿ 14 ಪೂರ್ಣಗೊಂಡಿದ್ದು 4 ಪ್ರಗತಿಯಲ್ಲಿವೆ. ಎನ್.ಆರ್.ಪುರದಲ್ಲಿ 222 ಅರ್ಜಿಗಳಲ್ಲಿ 191 ಅರ್ಜಿಗಳು ಅನುಮೋದನೆಗೊಂಡಿವೆ. 167 ಶೌಚಾಲಯಗಳು ಪೂರ್ಣಗೊಂಡಿದ್ದು 24 ಪ್ರಗತಿಯಲ್ಲಿವೆ. ತರೀಕೆರೆಯಲ್ಲಿ 567 ಅರ್ಜಿಗಳಲ್ಲಿ 396 ಅನುಮೋದನೆಯಾಗಿದ್ದು 239 ಪೂರ್ಣಗೊಂಡು 157 ಪ್ರಗತಿಯಲ್ಲಿವೆ.
ಬೀರೂರು 469 ಅರ್ಜಿಗಳಲ್ಲಿ 405 ಅನುಮೋದನೆಗೊಂಡು 153 ಪೂರ್ಣಗೊಂಡಿದ್ದು 127 ಪ್ರಗತಿಯಲ್ಲಿವೆ. 125 ಬಾಕಿ ಇದೆ. ಕಡೂರಿನಲ್ಲಿ 639 ಅರ್ಜಿಗಳು ಬಂದಿದ್ದು 278 ಶೌಚಾಲಯಗಳು ಪೂರ್ಣಗೊಂಡಿವೆ. ಒಟ್ಟಾರೆ 255 ಪ್ರಗತಿಯಲ್ಲಿದ್ದು, 93 ಶೌಚಾಲಯಗಳ ನಿರ್ಮಾಣ ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ, ಜಿಲ್ಲಾಧಿಕಾರಿ ಜಿ. ಸತ್ಯವತಿ ಸೇರಿದಂತೆ ನಗರಸಭೆ, ಪುರಸಭೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.







