ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ಜರಗಿಸಲಾಗಿದೆ: ಕವಿತಾಶೇಖರ್

ಚಿಕ್ಕಮಗಳೂರು, ಸೆ.26: ನನ್ನ ಅವಧಿಯಲ್ಲಿ ನಗರದಲ್ಲಿ ಉತ್ತಮ ಕೆಲಸ ಕಾರ್ಯವನ್ನು ನಿರ್ವಹಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್ ಹೇಳಿದರು.
ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ಕವರ್ ಥರ್ಮಾಕೂಲ್ ಬಗ್ಗೆ ಮುಲಾಜಿಲ್ಲದೆ ದಾಳಿ ನಡೆಸಿ ಬಿಗಿ ಕ್ರಮ ಅನುಸರಿಸಲಾಗಿದೆ. ಮಾರ್ಕೇಟ್ ರಸ್ತೆಯಲ್ಲಿರುವ ನಗರಸಭಾ ನಿಧಿಯಿಂದ ನಿರ್ಮಿಸಿಇದ್ದ 54 ಮಳಿಗೆಗಳನ್ನು ಪಾರದರ್ಶಕವಾಗಿ ಬಹಿರಂಗ ಹರಾಜು ನಡೆಸಿ ತಿಂಗಳಿಗೆ ರೂ.4.50 ಆದಾಯ ಬರುವಂತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನಗರಸಭೆಗೆ ವಿವಿಧ ಮೂಲಗಳಿಂದ ಬರಬೇಕಾದ ತೆರಿಗೆ ವಸೂಲಿಗೆ 3 ನೋಟಿಸ್ ನೀಡಲಾಗಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ಜರಗಿಸಲಾಗಿದೆ. ಕಸದ ವಿಲೇವಾರಿಗೆ ಅತಿಯಾದ ಗಮನ ವಹಿಸಿ ಹಲವು ಕಂಪೆನಿಗಳ ಜೊತೆ ಚರ್ಚಿಸಿ ಕೊಬನೆಗೆ ಐಟಿಸಿ ಕಂಪೆನಿಯ ಜೊತೆ ಕಸ ವಿಲೇವಾರಿ ಒಪ್ಪಂದ ಮಾಡಿಕೊಂಡಿದ್ದು, ಶೀಘ್ರವಾಗಿ ಕೆಲಸ ಆರಂಭವಾಗಲಿದೆ ಎಂದರು.
ನಗರದಲ್ಲಿ ವಿಪರೀತ ಪ್ಲೆಕ್ಸ್ ಹಾವಳಿ ಇದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣವಾಗಿ ಪ್ಲೆಕ್ಸ್ ನಿಷೇಧ ಮಾಡಲಾಗಿದೆ. ನಗರದಲ್ಲಿ ಮಧ್ಯಭಾಗದ ಎಂ.ಜಿ.ರಸ್ತೆಯ ಬಸವನಗುಡಿ ಹತ್ತಿರದ ಎಲ್ಲಾ ಬೀದಿ ಬದಿಯ ಹೂವು ಮತ್ತು ಹಣ್ಣು ಮಾರಾಟಗಾರರಿಗೆ ಬದಲಿ ಜಾಗದ ವ್ಯವಸ್ಥೆ ಮಾಡಿ ಅನುಕೂಲ ಕಲ್ಪಿಸಿ ಸ್ಥಳಾಂತರಿಸಲಾಗಿದೆ. ನಗರಸಭಾ ಕಂದಾಯ ವಸೂಲಾತಿಗೆ ವೇಗ ನೀಡಿ ಒಂದೇ ದಿನ 7.50 ಲಕ್ಷ ರೂ. ವಸೂಲಾತಿ ಮಾಡಿದ್ದಾಗಿ ತಿಳಿಸಿದರು.
ಪೌರ ಕಾರ್ಮಿಕರಿಂದ ದಿನದ ಬೆಳಿಗ್ಗೆ ಮಾತ್ರ ನಡೆಯುತ್ತಿದ್ದ ಕೆಲಸಕ್ಕೆ ಕಡಿವಾಣ ಹಾಕಿ ಅವರಲ್ಲಿ ಶಿಸ್ತು ಕ್ರಮ ತಂದು ಕೆಲವು ನಿರ್ದಾಕ್ಷಿಣ್ಯ ಕ್ರಮ ವಹಿಸಿ ದಿನದ ಎರಡು ಸಮಯದಲ್ಲಿ ಕೆಲಸ ಮಾಡುವಂತೆ ಕ್ರಮ ಜರಗಿಸಲಾಗಿದೆ. ಅಲ್ಲದೇ ಸರಿಯಾದ ಸಮಯಕ್ಕೆ ವೇತನ ಸಿಗುವಂತೆ ಮಾಡಿರುವುದಾಗಿ ನುಡಿದರು.
ಗೋಷ್ಠಿಯಲ್ಲಿ ಉಫಾದ್ಯಕ್ಷ ಕೆ.ರವೀಂದ್ರನಾಥ್ ಮತ್ತಿತರರಿದ್ದರು.







