ಫಿಫಾ ಅಂಡರ್-17 ವಿಶ್ವಕಪ್: ದಿನಗಣನೆ ಆರಂಭ

ಹೊಸದಿಲ್ಲಿ, ಸೆ.26: ಹದಿನೇಳನೆ ಆವೃತ್ತಿಯ ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 6 ರಿಂದ ಆರಂಭವಾಗಲಿದ್ದು 28 ರಂದು ಕೋಲ್ಕತಾದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಭಾರತ ಇದೇ ಮೊದಲ ಬಾರಿ ಫಿಫಾ ಟೂರ್ನಮೆಂಟ್‌ನ ಆತಿಥ್ಯವಹಿಸಿಕೊಂಡಿದೆ. 22 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 24 ತಂಡಗಳು ಭಾಗವಹಿಸಲಿದ್ದು ಭಾರತದ ಆರು ನಗರಗಳಲ್ಲಿ 52 ಪಂದ್ಯಗಳು ನಡೆಯುತ್ತವೆ.
ಅ.6 ರಂದು ಹೊಸದಿಲ್ಲಿ ಹಾಗೂ ಮುಂಬೈನಲ್ಲಿ ಏಕಕಾಲದಲ್ಲಿ ಪಂದ್ಯಗಳು ನಡೆಯುವ ಮೂಲಕ ವಿಶ್ವಕಪ್ ಆರಂಭಗೊಳ್ಳಲಿದೆ. ಫೈನಲ್ ಪಂದ್ಯ ಕೋಲ್ಕತಾದ ಪ್ರತಿಷ್ಠಿತ ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಫಿಫಾ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿ ಸ್ಪರ್ಧಿಸಲಿರುವ ಭಾರತ ಹೊಸದಿಲ್ಲಿಯಲ್ಲಿ ಅಮೆರಿಕದ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಆನಂತರ ಕೊಲಂಬಿಯಾ ಹಾಗೂ ಎರಡು ಬಾರಿಯ ವಿಶ್ವ ಚಾಂಪಿಯನ್ ಘಾನಾ ತಂಡವನ್ನು ಎದುರಿಸಲಿದೆ. 17ನೆ ಆವೃತ್ತಿಯ ವಿಶ್ವಕಪ್‌ನಲ್ಲಿ ಆತಿಥೇಯ ಭಾರತದ ಜೊತೆಗೆ ನೈಜರ್ ಹಾಗೂ ನ್ಯೂ ಕ್ಯಾಲೆಡೋನಿಯ ತಂಡಗಳು ಚೊಚ್ಚಲ ಪಂದ್ಯವನ್ನಾಡಲಿವೆ. ಹಾಲಿ ಚಾಂಪಿಯನ್ ನೈಜೀರಿಯ ಪ್ರಸ್ತುತ ವಿಶ್ವಕಪ್‌ನಲ್ಲಿ ಆಡುತ್ತಿಲ್ಲ. 1985ರಲ್ಲಿ ಅಂಡರ್-16 ವಿಶ್ವಕಪ್‌ನ ಮೂಲಕ ಆರಂಭವಾದ ಕಿರಿಯರ ಟೂರ್ನಮೆಂಟ್ 1991ರಲ್ಲಿ ಅಂಡರ್-17 ವಿಶ್ವಕಪ್ ಆಗಿ ಪರಿವರ್ತನೆಗೊಂಡಿತ್ತು.
ಗ್ರೂಪ್‌ಗಳ ವಿವರ
►ಎ ಗುಂಪು: ಭಾರತ, ಅಮೆರಿಕ, ಕೊಲಂಬಿಯ, ಘಾನ
►ಬಿ ಗುಂಪು: ಪರಾಗ್ವೆ, ಮಾಲಿ, ನ್ಯೂಝಿಲೆಂಡ್, ಟರ್ಕಿ
►ಸಿ ಗುಂಪು: ಇರಾನ್, ಗುನಿಯ, ಜರ್ಮನಿ, ಕೋಸ್ಟರಿಕಾ
►ಡಿ ಗುಂಪು: ಡಿಪಿಆರ್ ಕೊರಿಯ, ನೈಜರ್, ಬ್ರೆಝಿಲ್, ಸ್ಪೇನ್
►ಇ ಗುಂಪು: ಹೊಂಡುರಾಸ್, ಜಪಾನ್, ನ್ಯೂ ಕಾಲೆಡೊನಿಯ, ಫ್ರಾನ್ಸ್
►ಎಫ್ ಗುಂಪು: ಇರಾಕ್, ಮೆಕ್ಸಿಕೊ, ಚಿಲಿ, ಇಂಗ್ಲೆಂಡ್.
ಅಂಡರ್-17 ವಿಶ್ವಕಪ್‌ನ ಮುಖ್ಯಾಂಶಗಳು...
1. 1985 ರಿಂದ 2005ರ ತನಕ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ 16 ತಂಡಗಳು ಭಾಗವಹಿಸಿದ್ದವು. 2007ರ ಬಳಿಕ 24 ತಂಡಗಳು ಭಾಗವಹಿಸಲು ಆರಂಭಿಸಿದವು.
2. ಅಮೆರಿಕ ಹಾಗೂ ಬ್ರೆಝಿಲ್ ತಂಡಗಳು ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಅತ್ಯಂತ ಹೆಚ್ಚು ಬಾರಿ ಭಾಗವಹಿಸಿದ ದಾಖಲೆ ಹಂಚಿಕೊಂಡಿವೆ. ಉಭಯ ತಂಡಗಳು ಈ ವರ್ಷ 16ನೆ ಬಾರಿ ಅಂಡರ್-17 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿವೆ.
3. ಅಂಡರ್-17 ವಿಶ್ವಕಪ್ ಟೂರ್ನಿಗಳು ಏಷ್ಯಾಖಂಡದಲ್ಲೇ ಹೆಚ್ಚು ಆಯೋಜಿಸಲ್ಪಟ್ಟಿವೆ. ಚೀನಾ(1985), ಜಪಾನ್(1983), ಕೊರಿಯಾ ರಿಪಬ್ಲಿಕ್(2007) ಹಾಗೂ ಯುಎಇ(2013) ಈ ಹಿಂದೆ ಆಯೋಜಿಸಿದ್ದು, ಭಾರತ ವಿಶ್ವಕಪ್ ಆತಿಥ್ಯವಹಿಸಿಕೊಂಡಿರುವ ಏಷ್ಯಾದ 5ನೆ ದೇಶವಾಗಿದೆ.
4.ನೈಜೀರಿಯ ಐದು ಬಾರಿ(1985, 1993, 2007, 2013, 2015) ಟೂರ್ನಮೆಂಟ್‌ನ್ನು ಜಯಿಸುವ ಮೂಲಕ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. ನೈಜೀರಿಯ ಮೂರು ಬಾರಿ(1987, 2001,2009) ರನ್ನರ್-ಅಪ್ ಪ್ರಶಸ್ತಿ ಜಯಿಸಿದೆ. ಆದರೆ, ಈ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ.
5.ಬ್ರೆಝಿಲ್ ಮೂರು ಬಾರಿ(1997,1999,2003), ಘಾನಾ(1991,1995) ಹಾಗೂ ಮೆಕ್ಸಿಕೊ(2005,2011)ಎರಡು ಬಾರಿ ವಿಶ್ವಕಪ್ ಗೆದ್ದುಕೊಂಡಿವೆ. ಸೋವಿಯೆಟ್ ಯೂನಿಯನ್(1987), ಸೌದಿ ಅರೇಬಿಯ(1989), ಫ್ರಾನ್ಸ್(2001) ಹಾಗೂ ಸ್ವಿಟ್ಝರ್ಲೆಂಡ್(2009) ತಲಾ ಒಂದು ಬಾರಿ ವಿಶ್ವಕಪ್ ಟೂರ್ನಿಯನ್ನು ಜಯಿಸಿದ್ದವು.
6. ಘಾನಾ ಸತತ ನಾಲ್ಕು ಬಾರಿ(1991,1993,1995 ಹಾಗೂ 1997) ವಿಶ್ವಕಪ್ ಫೈನಲ್ ತಲುಪಿದೆ. ಎರಡು ಬಾರಿ(1991,1995) ವಿಶ್ವಕಪ್‌ನ್ನು ಗೆದ್ದುಕೊಂಡಿದೆ.
7. ಭಾರತ ಅಂಡರ್-17 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ 18ನೆ ಏಷ್ಯಾ ತಂಡವಾಗಿದೆ.
8. 2017ರ ಆವೃತ್ತಿಯ ವಿಶ್ವಕಪ್‌ನಲ್ಲಿ ನೈಜರ್, ನ್ಯೂ ಕ್ಯಾಲೆಡೊನಿಯ ಹಾಗೂ ಆತಿಥೇಯ ಭಾರತ ಪಾದಾರ್ಪಣೆಗೈಯ್ಯಲಿವೆ.
9.ಅಂಡರ್-17 ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಒಟ್ಟು 12 ಆಟಗಾರರು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದ್ದಾರೆ.
10. ಬ್ರೆಝಿಲ್‌ನ ರೊನಾಲ್ಡಿನೊ ಫಿಫಾ ಅಂಡರ್-17 ವಿಶ್ವಕಪ್(1997) ಹಾಗೂ ಫಿಫಾ ವಿಶ್ವಕಪ್ ಫೈನಲ್ಸ್(2002) ಪ್ರಶಸ್ತಿಗಳೆರಡನ್ನೂ ಜಯಿಸಿದ ಏಕೈಕ ಆಟಗಾರ.
11. ಫಿಫಾ ಅಂಡರ್-17 ವಿಶ್ವಕಪ್ ಹಾಗೂ ಫಿಫಾ ವಿಶ್ವಕಪ್‌ನಲ್ಲಿ ಆಡಿರುವ ಆಟಗಾರರ ಪೈಕಿ ಮರಿಯೊ ಗೊಟ್ಜ್(2009), ಇಮಾನುಯೆಲ್ ಪೀಟಿಟ್ ಹಾಗೂ ಆ್ಯಂಡ್ರಿಸ್ ಇನಿಸ್ತಾ ಫಿಫಾ ವಿಶ್ವಕಪ್‌ನಲ್ಲಿ ಗೋಲು ಬಾರಿಸಿದ್ದಾರೆ.
12.ಫಿಫಾ ಅಂಡರ್-17 ವಿಶ್ವಕಪ್ ಹಾಗೂ ಫಿಫಾ ವಿಶ್ವಕಪ್‌ನಲ್ಲಿ ಆಡಿರುವ ಆಟಗಾರರಲ್ಲಿ ಐಕರ್ ಕ್ಯಾಸಿಲ್ಲಾಸ್ ನಾಯಕನಾಗಿ ಫಿಫಾ ವಿಶ್ವಕಪ್(2010) ಜಯಿಸಿದ ಏಕೈಕ ಆಟಗಾರನಾಗಿದ್ದಾರೆ.
13. 2011ರಲ್ಲಿ ಮೆಕ್ಸಿಕೊ ಹಾಗೂ ಉರುಗ್ವೆ ನಡುವೆ ಮೆಕ್ಸಿಕೊ ಸಿಟಿಯಲ್ಲಿ ನಡೆದ ಅಂಡರ್-17 ವಿಶ್ವಕಪ್ ಪಂದ್ಯದಲ್ಲಿ ಅತ್ಯಂತ ಗರಿಷ್ಠ(98,943)ಸಂಖ್ಯೆಯ ಪ್ರೇಕ್ಷಕರು ಹಾಜರಾಗಿದ್ದರು.
14. 2013ರಲ್ಲಿ ಯುಎಇನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಗರಿಷ್ಠ ಗೋಲುಗಳು(52 ಪಂದ್ಯಗಳು, 172 ಗೋಲು)ದಾಖಲಾಗಿದ್ದವು.
15. 1985ರ ಮೊದಲ ಆವೃತ್ತಿಯ ವಿಶ್ವಕಪ್ ಹೊರತುಪಡಿಸಿ 1987, 1989 ಹಾಗೂ 2007ರಲ್ಲಿ ಗರಿಷ್ಠ ಏಳು ತಂಡಗಳು ಚೊಚ್ಚಲ ಪಂದ್ಯವನ್ನಾಡಿದ್ದವು.
16. 1987, 1989, 1999 ಹಾಗೂ 2007ರಲ್ಲಿ ಫೈನಲ್ ಪಂದ್ಯದ ಫಲಿತಾಂಶ ಪೆನಾಲ್ಟಿ ಶೂಟೌಟ್‌ನಲ್ಲಿ ನಿರ್ಧಾರವಾಗಿತ್ತು. ಉಳಿದ ಎಲ್ಲ ಫೈನಲ್ ಪಂದ್ಯಗಳ ಫಲಿತಾಂಶ ನಿಗದಿತ ಸಮಯದಲ್ಲಿ ಬಂದಿತ್ತು.
17. ಅಂಡರ್-17 ವಿಶ್ವಕಪ್‌ನಲ್ಲಿ ಬ್ರೆಝಿಲ್(166) ಹಾಗೂ ನೈಜೀರಿಯ(149) ನೂರಕ್ಕೂ ಅಧಿಕ ಗೋಲು ಬಾರಿಸಿದ ಸಾಧನೆ ಮಾಡಿವೆ. ಸ್ಪೇನ್(97),ಮೆಕ್ಸಿಕೊ(97), ಜರ್ಮನಿ(92) ಹಾಗೂ ಘಾನಾ(86) ಭಾರತದಲ್ಲಿ ಗೋಲುಗಳ ಶತಕ ಪೂರೈಸುವ ವಿಶ್ವಾಸದಲ್ಲಿವೆ.
18. ಬ್ರೆಝಿಲ್ ಹಾಗೂ ನೈಜೀರಿಯ ಒಂದು ಬಾರಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿವೆ. ಬ್ರೆಝಿಲ್ 1997,1999, ನೈಜೀರಿಯ 2013 ಹಾಗೂ 2015ರಲ್ಲಿ ಈ ಸಾಧನೆ ಮಾಡಿದ್ದವು.
19: ಒಂದೇ ಫುಟ್ಬಾಲ್ ಒಕ್ಕೂಟದ ತಂಡಗಳು ಎರಡು ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾಗಿವೆ. 1993ರಲ್ಲಿ ಘಾನಾ ತಂಡ ನೈಜೀರಿಯ ವಿರುದ್ಧ, 2015ರಲ್ಲಿ ನೈಜೀರಿಯ ಹಾಗೂ ಮಾಲಿ ತಂಡಗಳು ಫೈನಲ್‌ನಲ್ಲಿ ಸೆಣಸಾಡಿದ್ದವು.
20. ಈ ವರ್ಷದ ಆವೃತ್ತಿಯಲ್ಲಿ ಜಾಗತಿಕ ಮಟ್ಟದಲ್ಲಿ ಅಂದಾಜು 200 ಮಿಲಿಯನ್ ಟಿವಿ ವೀಕ್ಷಕರು ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸುವ ನಿರೀಕ್ಷೆಯಿದೆ. ಸೋನಿ ಟೆನ್ 2 ಹಾಗೂ ಸೋನಿ ಟೆನ್ 3 ವಿಶ್ವಕಪ್‌ನ ಅಧಿಕೃತ ಪ್ರಸಾರವಾಹಿನಿಗಳಾಗಿದ್ದು 185 ದೇಶಗಳಲ್ಲಿ ವಿಶ್ವಕಪ್ ನೇರ ಪ್ರಸಾರ ಮಾಡುವ ಹಕ್ಕು ಹೊಂದಿವೆ.
21: 2001ರಲ್ಲಿ ಫ್ರಾನ್ಸ್‌ನ ಫ್ಲೊರೆಂಟ್ ಸಿನಾಮಾ ಅಂಡರ್-17 ವಿಶ್ವಕಪ್‌ನಲ್ಲಿ ಗೋಲ್ಡನ್ ಬೂಟ್ ಹಾಗೂ ಗೋಲ್ಡನ್ ಬಾಲ್ ಎರಡೂ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದ್ದರು.
22: ನೈಜೀರಿಯದ ನಾಲ್ವರು ಆಟಗಾರರು ಗೋಲ್ಡನ್ ಬಾಲ್ ಪ್ರಶಸ್ತಿ ಪಡೆದಿದ್ದಾರೆ. ಕೆಲಿಚಿ ನವಾಕಾಲಿ(2015), ಕೆಲಿಚಿ ಐಹಿನಾಚೊ(2013), ಸ್ಯಾನಿ ಇಮ್ಯಾನುಯೆಲ್(2009) ಹಾಗೂ ಫಿಲಿಪ್ ಒಸುಂಡೊ(1987)ಈ ಸಾಧನೆ ಮಾಡಿದ್ದರು.
23. ಸೌಲಿಮನ್ ಕೌಲಿಬಾಲಿ(ಐವರಿಕೋಸ್ಟ್), ಫ್ಲೋರೆಂಟ್ ಪೊಂಗೊಲ್(ಫ್ರಾನ್ಸ್) ಹಾಗೂ ಮಾರ್ಸೆಲ್ ವಿಟೆಝೆಕ್(ಜರ್ಮನಿ) ಅಂಡರ್-17 ವಿಶ್ವಕಪ್‌ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ಗೋಲು ಬಾರಿಸಿದ್ದಾರೆ.







