ಪ್ರವಾಸೋದ್ಯಮ ಅಭಿವೃದ್ದಿಗೆ ಖಾಸಗಿಗಳ ಸಹಭಾಗಿತ್ವ ಅಗತ್ಯ: ವಾಸುದೇವ
ಮಂಗಳೂರು, ಸೆ. 26: ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಖಾಸಗಿ ವ್ಯಕ್ತಿಗಳು ಮತ್ತು ಸ್ಥಳೀಯರ ಸಹಕಾರ ಅಗತ್ಯವಾಗಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಿವೃತ್ತ ನಿರ್ದೇಶಕ ಎಂ.ಆರ್.ವಾಸುದೇಹ ಅಭಿಪ್ರಾಯಪಟ್ಟಿದ್ದಾರೆ.
ಅವರು ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ನಗರದ ವಿವಿಯ ಡಾ. ಶಿವರಾಮ ಕಾರಂತ ಭವನದಲ್ಲಿ ಬುಧವಾರ ಏರ್ಪಡಿಸಲಾದ ‘ಸುಸ್ಥಿರ ಪ್ರವಾಸೋದ್ಯಮ-ಅಭಿವೃದ್ಧಿಯ ಸಾಧನ’ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಈ ನಿಟ್ಟಿನಲ್ಲಿ ಖಾಸಗಿ ವ್ಯಕ್ತಿಗಳು ಮತ್ತು ಸ್ಥಳೀಯರು ಕೈಜೋಡಿಸಿದರೆ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಬಹುದು. ಪ್ರವಾಸೋದ್ಯಮ ಅಭಿವೃದ್ದಿಗೆ ಸಂಬಂಧಿಸಿ ದಶಕಗಳಿಂದಲೂ ಚರ್ಚೆ ನಡೆಯುತ್ತಲೇ ಬಂದಿವೆ. ಸುಸ್ಥಿರ ಪ್ರವಾಸೋದ್ಯ, ಆರ್ಥಿಕ ಸ್ಥಿತಿ ಮತ್ತು ಪ್ರವಾಸಿಗರಿಗೆ ಕಲ್ಪಿಸಬೇಕಾದ ಸೌಲಭ್ಯಗಳ ಬಗ್ಗೆಯೂ ಚರ್ಚೆ ನಡೆಯಬೇಕಾಗಿದೆ ಎಂದರು.
ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರು ಅವರಿಗೆ ಒದಗಬೇಕಾದ ಸೌಲಭ್ಯಗಳಿಂದ ವಂಚಿತರಾಗುವಂತಾಗಬಾರದು. ಗುಣಮಟ್ಟ ಆಹಾರದ ಹೊಟೇಲ್‌ಗಳು, ವಸತಿ ಮತ್ತಿತರ ಅಗತ್ಯ ಸೌಲಭ್ಯಗಳು ಇರಬೇಕಾಗಿದೆ. ಒಂದು ಸ್ಥಳಕ್ಕೆ ಭೇಟಿ ನೀಡಿದ್ದ ಪ್ರವಾಸಿಗ ಅಲ್ಲಿನ ವ್ಯವಸ್ಥೆ ಆತನನ್ನು ಸಂತುಷ್ಟಗೊಳಿಸದಿದ್ದರೆ, ಇನ್ನೊಮ್ಮೆ ಆ ಪ್ರವಾಸಿಗ ಆ ಸ್ಥಳಕ್ಕೆ ಭೇಟಿ ನೀಡಲಾರ ಅಥವಾ ಇತರರಿಗೆ ಭೇಟಿ ನೀಡುವಂತೆ ಪ್ರೇರೇಪಿಸಲಾರ. ಆದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಇಂದಿನ ಪರಿಸ್ಥಿತಿಯಲ್ಲಿ ಅಲ್ಲಿನ ವ್ಯವಸ್ಥೆ ಮತ್ತು ಪೂರಕ ವಾತಾವರಣವು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಾಸುದೇವ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಎಂ.ಎ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ಕಾದರ್ ಶಾ ಉಪಸ್ಥಿತರಿದ್ದರು.







