ದ.ಕ. ಆಟೋ ಮೊಬೈಲ್ ಆ್ಯಂಡ್ ಟೈರ್ ಡೀಲರ್ಸ್ ಸಂಘದಿಂದ ಅತ್ಮಾನಾಥನ್‌ರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ
ಮಂಗಳೂರು, ಸೆ. 27: ಆಟೋಮೊಬೈಲ್ ಬಿಡಿಭಾಗಗಳ ವ್ಯಾಪಾರದಲ್ಲಿ ವಿಶೇಷ ಸೇವೆಗಾಗಿ ಮದ್ರಾಸ್ ಆಟೋ ಸರ್ವಿಸ್ (ಟಿವಿಎಸ್ ಗ್ರೂಪ್)ನ ಮಾಜಿ ಪ್ರಾದೇಶಿಕ ಮ್ಯಾನೇಜರ್ ಆರ್. ಅತ್ಮಾನಾಥನ್ ಅವರಿಗೆ ದ.ಕ. ಆಟೋಮೊಬೈಲ್ ಆ್ಯಂಡ್ ಟೈರ್ ಡೀಲರ್ಸ್ ಸಂಘದ ವತಿಯಿಂದ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಗರದ ಪೊಂಪೆ ಚರ್ಚ್ ಸಭಾಂಗಣದಲ್ಲಿ ನಡೆದ ಸಂಘದ 33ನೆ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಆರ್. ಅತ್ಮಾನಾಥನ್ 1982 ರಿಂದ 1996 ರವರೆಗೆ 14 ವರ್ಷಗಳ ಕಾಲ ಮಂಗಳೂರಿನಲ್ಲ್ಲಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಹೊಸದಾಗಿ ರೂಪುಗೊಂಡ ಸಂಘಟನೆಗಾಗಿ ಸದಸ್ಯತ್ವವನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಸ್ತೂರಿ ಪ್ರಭಾಕರ್ ಪೈ, ಕಾರ್ಯದರ್ಶಿ ಕೆ. ವಿಲಾಸ್ ಕುಮಾರ್, ಖಜಾಂಚಿ ಮಾರೂರು ಶಶಿಧರ್ ಪೈ, ಜಂಟಿ ಕಾರ್ಯದರ್ಶಿ ಆರ್. ಪಿ. ಡಿಸೋಜಾ, ಜಂಟಿ ಖಜಾಂಚಿ ಲಕ್ಷ್ಮೀನಾರಾಯಣ ನಾಯಕ್ ಮತ್ತು ಪೋಷಕ ಕೆ.ಜಿ.ಶೆಣೈ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸೆಸೆಲ್ಸಿ ಮತ್ತು ಪಿ.ಯು.ಸಿ. ಪರೀಕ್ಷೆಗಳಲ್ಲಿ ಸಾಧನೆ ಮಾಡಿದ 22 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರಮಾಣಪತ್ರ ಮತ್ತು ನಗದು ಬಹುಮಾನ ನೀಡಿ ಗೌರಸಲಾಯಿತು.ವಿದ್ಯಾರ್ಥಿಗಳ ಪೈಕಿ ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಬಿಂದು ಮತ್ತು ಬಿಂದಿಯಾ ಅವರಿಗೆ ವಿಶೇಷ ಗೌರವವನ್ನು ನೀಡಲಾಯಿತು.





