ಕಲ್ಲಡ್ಕ ಚೂರಿ ಇರಿತ ಪ್ರಕರಣ: ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ
ಬಂಟ್ವಾಳ, ಸೆ.27: ಮೂರು ತಿಂಗಳ ಹಿಂದೆ ಕಲ್ಲಡ್ಕದಲ್ಲಿ ನಡೆದ ಯುವಕನೊಬ್ಬನಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಬಂಟ್ವಾಳ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ನಡುವೆ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸರ ನಿವೇದನೆಯ ಮೇರೆಗೆ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಕಲ್ಲಡ್ಕದ ಮಿಥುನ್ ಹಾಗೂ ಯತಿನ್ ಬಂಟ್ವಾಳ ನ್ಯಾಯಾಲಯದ ಮುಂದೆ ಶರಣಾಗಿದ್ದು, ಅ.7ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬುಧವಾರ ಬಂಟ್ವಾಳ ನಗರ ಪೊಲೀಸರು ಇವರಿಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯದ ಮುಂದೆ ನಿವೇದಿಸಿದ್ದರು. ಇದನ್ನು ಪುರಸ್ಕರಿದ್ದ ನ್ಯಾಯಾಲಯ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಮೇ 25ರಂದು ಹಾಸಿರ್ ಎಂಬಾತನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಥುನ್ ಹಾಗೂ ಯತಿನ್ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರ ನಂತರ ಇವರಿಬ್ಬರು ತಲೆಮರೆಸಿಕೊಂಡಿದ್ದರು. ಈ ನಡುವೆ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.





