ನೋಟು ಅಮಾನ್ಯ ಮಹಾ ಪ್ರಮಾದ,ಜಿಎಸ್‌ಟಿ ಕಳಪೆ ಪರಿಕಲ್ಪನೆ
ಮೋದಿ ಸರಕಾರಕ್ಕೆ ಯಶವಂತ ಸಿನ್ಹಾ ಚಾಟಿ

ಹೊಸದಿಲ್ಲಿ,ಸೆ.27: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಆರ್ಥಿಕ ನೀತಿಗಳ ವಿರುದ್ಧ ತೀವ್ರ ದಾಳಿ ನಡೆಸಿರುವ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ವಿತ್ತಸಚಿವ ಯಶವಂತ ಸಿನ್ಹಾ ಅವರು, ಆರ್ಥಿಕತೆಯು ಅಧಃಪತನದ ಸುಳಿಯತ್ತ ಸಾಗುತ್ತಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಆಂಗ್ಲ ದೈನಿಕವೊಂದರಲ್ಲಿನ ತನ್ನ ಲೇಖನದಲ್ಲಿ ಸಿನ್ಹಾ ಆರ್ಥಿಕ ಕ್ಷೇತ್ರದ ಕುರಿತ ಮೋದಿ ಸರಕಾರದ ನಿರ್ಧಾರಗಳನ್ನು ತೀವ್ರವಾಗಿ ಝಾಡಿಸಿದ್ದಾರೆ. ‘‘ವಿತ್ತಸಚಿವ ಅರುಣ್ ಜೇಟ್ಲಿಯವರು ಆರ್ಥಿಕತೆಯಲ್ಲಿ ಉಂಟು ಮಾಡಿರುವ ಗೋಜಲುಗಳ ವಿರುದ್ಧ ಈಗಲೂ ನಾನು ಮಾತನಾಡದಿದ್ದರೆ ನಾನು ನನ್ನ ರಾಷ್ಟ್ರೀಯ ಕರ್ತವ್ಯದಲ್ಲಿ ವಿಫಲನಾಗುತ್ತೇನೆ’’ ಎಂದು ಬರೆದಿರುವ ಅವರು, ಬಿಜೆಪಿಯಲ್ಲಿರುವ ಹೆಚ್ಚಿನವರಿಗೆ ಇಂದಿನ ಸ್ಥಿತಿಯ ಅರಿವಿದೆ, ಆದರೆ ಅದರ ವಿರುದ್ಧ ಧ್ವನಿಯೆತ್ತಲು ಹೆದರಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಲೇಖನದುದ್ದಕ್ಕೂ ನಿರ್ದಾಕ್ಷಿಣ್ಯವಾಗಿ ಸರಕಾರವನ್ನು ತರಾಟೆಗೆತ್ತಿಕೊಂಡಿರುವ ಸಿನ್ಹಾ, ನೋಟು ಅಮಾನ್ಯ ಕ್ರಮವು ‘ಶಮನಗೊಳ್ಳದ ಆರ್ಥಿಕ ಪ್ರಮಾದ ’ಎನ್ನುವುದು ಈಗಾಗಲೇ ರುಜುವಾತಾಗಿದೆ. ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‌ಟಿ)ಯು ಅತ್ಯಂತ ಕೆಟ್ಟ ಪರಿಕಲ್ಪನೆಯಾಗಿದೆ ಮತ್ತು ಕಳಪೆ ಅನುಷ್ಠಾನದಿಂದಾಗಿ ವ್ಯಾಪಕ ಸರ್ವನಾಶವನ್ನುಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.
ಸಿನ್ಹಾ ಅವರ ಟೀಕೆಗಳು ಪ್ರಮುಖವಾಗಿ ಜೇಟ್ಲಿಯವರನ್ನೇ ಗುರಿಯಾಗಿಸಿಕೊಂಡಿವೆ.
ಅರುಣ್ ಜೇಟ್ಲಿಯವರು ಸಂಪುಟದಲ್ಲಿಯ ಅತ್ಯುತ್ತಮ ಮತ್ತು ಅತ್ಯಂತ ಬುದ್ಧಿವಂತ ಸಚಿವ ಎಂದು ಪರಿಗಣಿಸಲ್ಪಟ್ಟಿದ್ದಾರೆ. ನೂತನ ಸರಕಾರದಲ್ಲಿ ಅವರು ವಿತ್ತ ಸಚಿವರಾ ಗುತ್ತಾರೆ ಎನ್ನುವುದು 2014ರ ಚುನಾವಣೆಯ ಮೊದಲೇ ನಿರ್ಧಾರವಾಗಿತ್ತು ಎಂದು ಸಿನ್ಹಾ ಬರೆದಿದ್ದಾರೆ.
ಜಿಡಿಪಿ ದರದಲ್ಲಿ ಮಂದಗತಿಗಾಗಿ ‘ತಾಂತ್ರಿಕ ಕಾರಣಗಳನ್ನು’ ಉಲ್ಲೇಖಿಸಿದ್ದಕ್ಕಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನೂ ಝಾಡಿಸಿರುವ ಸಿನ್ಹಾ, ದೇಶದ ಅತ್ಯಂತ ದೊಡ್ಡ ಸರಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಎಸ್‌ಬಿಐ ಕೂಡ ಅಪರೂಪದ ಮುಕ್ತ ನಿಲುವು ತಳೆದು ಜಿಡಿಪಿ ಹಿಂಜರಿತವು ಕ್ಷಣಿಕ ಅಥವಾ ತಾಂತ್ರಿಕವಲ್ಲ, ಅದು ಮುಂದುವರಿಯಲಿದೆ. ಆರ್ಥಿಕ ಹಿಂಜರಿತವು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ಹೇಳಿದೆ. ಕಳೆದ ತ್ರೈಮಾಸಿಕದಲ್ಲಿ ಕೆಲವು ಕ್ಷೇತ್ರಗಳಲ್ಲಿ ‘ತಾಂತ್ರಿಕ ’ಕಾರಣಗಳಿಂದಾಗಿ ಮಂದಗತಿ ಉಂಟಾಗಿದೆ ಮತ್ತು ಶೀಘ್ರವೇ ಅದು ಹಳಿಗೆ ಮರಳಲಿದೆ ಎಂದು ಕೆಲವೇ ದಿನಗಳ ಹಿಂದೆ ಶಾ ನೀಡಿದ್ದ ಹೇಳಿಕೆಯನ್ನು ಅದು ಬಹಿರಂಗವಾಗಿ ತಿರಸ್ಕರಿಸಿದೆ ಎಂದು ಹೇಳಿದ್ದಾರೆ.
2017-18ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅಂಕಿಅಂಶಗಳು ಕಳೆದ ತಿಂಗಳು ಬಿಡುಗಡೆಗೊಂಡಿದ್ದು, ಜಿಡಿಪಿ ಬೆಳವಣಿಗೆ ದರವು ಶೇ.5.7ಕ್ಕೆ ಕುಸಿದಿರುವುದನ್ನು ಬೆಟ್ಟು ಮಾಡಿವೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಅದು ಶೇ.7.6ರಷ್ಟು ಉತ್ತುಂಗದಲ್ಲಿತ್ತು.
ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗಳು ನಡೆಸುತ್ತಿರುವ ದಾಳಿಗಳನ್ನು ಮೂದಲಿಸಿರುವ ಸಿನ್ಹಾ, ಇದು ಜನರ ಮನಸ್ಸುಗಳಲ್ಲಿ ಭೀತಿಯನ್ನು ಬಿತ್ತುವ ಹೊಸ ಆಟವಾಗಿದೆ. ನಾವು ಪ್ರತಿಪಕ್ಷವಾಗಿದ್ದಾಗ ‘ರೇಡ್ ರಾಜ್’ ವಿರುದ್ಧ ಪ್ರತಿಭಟಿಸಿದ್ದೆವು. ಇಂದು ಅದು ದಿನಚರಿಯಾಗಿಬಿಟ್ಟಿದೆ ಎಂದಿದ್ದಾರೆ.
‘ಒಂದು ಪೈಸೆಯಿಂದ ಕೆಲವು ರೂಪಾಯಿಗಳವರೆಗೆ’ ರೈತರ ‘ಭಾರೀ’ ಸಾಲ ಮನ್ನಾಗಳನ್ನೂ ಅವರು ಗೇಲಿ ಮಾಡಿದ್ದಾರೆ.
ತಾನು ಬಡತನವನ್ನು ಅತ್ಯಂತ ಹತ್ತಿರದಿಂದ ನೋಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೊಳ್ಳುತ್ತಿದ್ದಾರೆ. ಎಲ್ಲ ಭಾರತೀಯರೂ ಅದನ್ನು ಅಷ್ಟೇ ಹತ್ತಿರದಿಂದ ನೋಡುವಂತಾಗಬೇಕೆಂದು ಅವರ ವಿತ್ತಸಚಿವರು ಹಗಲಿರುಳೂ ಶ್ರಮಿಸುತ್ತಿದ್ದಾರೆ ಎಂದು ಸಿನ್ಹಾ ಕುಟುಕಿದ್ದಾರೆ.
ಸಿನ್ಹಾ ಅವರ ತೀವ್ರ ಟೀಕೆ ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿದ್ದು, ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿದ್ದಾರೆ. ಪ್ರತಿಪಕ್ಷವು ಸಿನ್ಹಾ ಲೇಖನಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಆರ್ಥಿಕತೆ ಮುಳುಗುತ್ತಿದೆ ಎನ್ನುವುದನ್ನು ಸರಕಾರವು ಈಗಲಾದರೂ ಒಪ್ಪುತ್ತದೆಯೇ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.







