‘ರೊಟಾಸಿಲ್’ ಲಸಿಕೆ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ
ಅತಿಸಾರ ಭೇದಿಗೆ ಕಾರಣವಾಗಿರುವ ರೊಟವೈರಸ್ ನಿರೋಧಕ

ಹೊಸದಿಲ್ಲಿ, ಸೆ.27: ಮಕ್ಕಳನ್ನು ಕಾಡುವ ಅತಿಸಾರ ಭೇದಿಗೆ ಕಾರಣವಾಗಿರುವ ರೊಟವೈರಸ್‌ಗೆ ಮತ್ತೊಂದು ನಿರೋಧಕ ಲಸಿಕೆಯನ್ನು ಭಾರತದ ವೈದ್ಯಕೀಯ ಸಂಶೋಧಕರು ಕಂಡುಹಿಡಿದಿದ್ದು ‘ರೊಟಾಸಿಲ್’ ಎಂಬ ಹೆಸರಿನ ಈ ಲಸಿಕೆ ಮುಂದಿನ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.
ಪುಣೆಯ ‘ಸೇರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯ’ದ ವಿಜ್ಞಾನಿಗಳು ಕೋಲ್ಕತಾ ಮೂಲದ ‘ಕಾಲರ ಹಾಗೂ ಕರುಳು ಸಂಬಂಧಿ ಕಾಯಿಲೆಗೆ ಸಂಬಂಧಿಸಿದ ರಾಷ್ಟ್ರೀಯ ಸಂಸ್ಥೆ’ ಮತ್ತು ಸರಕಾರೇತರ ಸಂಸ್ಥೆ ‘ಪಿಎಟಿಎಚ್’ ಸಹಯೋಗದೊಂದಿಗೆ ಈ ಲಸಿಕೆಯನ್ನು ಸಂಶೋಧಿಸಿದ್ದಾರೆ. ಈ ಲಸಿಕೆ ಗಂಭೀರಾವಸ್ಥೆಗೆ ತಲುಪಿರುವ ಅತಿಸಾರ ಭೇದಿ ಪ್ರಕರಣಗಳಲ್ಲಿ ಶೇ.55ರಷ್ಟು ಯಶಸ್ಸು ಸಾಧಿಸಿದೆ.
ರೊಟಾಸಿಲ್ ಲಸಿಕೆ ಪ್ರತೀ ವರ್ಷ ಭಾರತದಲ್ಲಿ ಅತಿಸಾರ ಭೇದಿಯಿಂದ ಸಾವಿಗೀಡಾಗುವ ಸಾವಿರಾರು ಮಕ್ಕಳ ಪ್ರಾಣವನ್ನು ಉಳಿಸಬಲ್ಲದು. ಅಲ್ಲದೆ ವಿಶ್ವಮಟ್ಟದಲ್ಲೂ ಈ ಲಸಿಕೆ ಪರಿಣಾಮಕಾರಿ ಪಾತ್ರ ನಿರ್ವಹಿಸಬಲ್ಲದು ಎಂದು ಪುಣೆಯ ಸೇರಮ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಧೆರೆ ಹೇಳಿದ್ದಾರೆ. ಈಗ ಭಾರತದಲ್ಲಿ ಮೂರು ವಿಧದ ಭೇದಿ ಲಸಿಕೆ ಲಭ್ಯವಿದೆ. 2013ರಲ್ಲಿ ವಿಶ್ವದಾದ್ಯಂತ 5 ವರ್ಷದೊಳಗಿನ 5,78,000 ಮಕ್ಕಳು ಅತಿಸಾರ ಭೇದಿ ಕಾಯಿಲೆಯಿಂದ ಮೃತಪಟ್ಟಿದ್ದು ಇವರಲ್ಲಿ ಶೇ.37ರಷ್ಟು ಮಕ್ಕಳ ಸಾವಿಗೆ ರೊಟವೈರಸ್ ಕಾರಣವಾಗಿದೆ. ಹೀಗೆ ಮೃತಪಟ್ಟಿರುವವರಲ್ಲಿ ಶೇ.22ರಷ್ಟು ಮಕ್ಕಳು ಭಾರತದವರು ಎಂದು ವರದಿಯೊಂದು ತಿಳಿಸಿದೆ.
ಪ್ರತೀವರ್ಷ ಭಾರತದಲ್ಲೇ ರೊಟವೈರಸ್ ಕಾರಣದಿಂದ ಜಠರವ್ರಣ ಕಾಯಿಲೆಯ 11.37 ಮಿಲಿಯನ್ ಪ್ರಕರಣ ವರದಿಯಾಗುತ್ತಿದ್ದು ಸರಾಸರಿ 3.27 ಮಿಲಿಯನ್ ಜನ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದರೆ ಉಳಿದವರು ಒಳರೋಗಿ ವಿಭಾಗಕ್ಕೆ ದಾಖಲಾಗುತ್ತಾರೆ ಎಂದು ಅಂದಾಜಿಸಲಾಗಿದೆ.







