ಸುರತ್ಕಲ್‌ನ - 6ಪಥದ ಕಾಂಕ್ರೀಟ್ ರಸ್ತೆಗೆ 58 ಕೋಟಿ ರೂ ಮಂಜೂರು: ಮೊಯ್ದಿನ್ ಬಾವ
ಅ.14ರಂದು ಕಾಮಗಾರಿಗೆ ಮುಖ್ಯಮಂತ್ರಿ ಚಾಲನೆ
ಮಂಗಳೂರು, ಸೆ. 27: ಸುರತ್ಕಲ್‌ನ -ಕಾನ-ಬಾಳ ಗಣೇಶ್ ಪುರ ವರೆಗಿನ 6ಪಥದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರಕಾರದ ವತಿಯಿಂದ 58 ಕೋಟಿ ರೂ. ಬಿಡುಗಡೆ ಮಾಡಲು ಬುಧವಾರ ನಡೆದ ಸಚಿವ ಸಂಪುಟ ಸಮ್ಮತಿಸಿದೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮನಪಾಕ್ಕೆ ಒಳಪಟ್ಟ ಈ ರಸ್ತೆಗೆ ಅನುದಾನ ಕೊರತೆಯಿದ್ದ ಕಾರಣ ಸರಕಾರಕ್ಕೆ ಕಳುಹಿಸಿದ ಪ್ರಸ್ತಾವನೆಗೆ ಮಂಜೂರಾತಿ ದೊರೆತಿದೆ. ಸುಮಾರು 5 ಕಿ.ಮೀ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 10 ದಿನಗಳ ಒಳಗೆ ಲೋಕೋಪಯೋಗಿ ಇಲಾಖೆಯ ಮೂಲಕ ಡಿಪಿಆರ್ ಮಾಡಿ ಸರಕಾರಕ್ಕೆ ಕಳುಹಿಸಿ ಅ.14ರಂದು ರಾಜ್ಯದ ಮುಖ್ಯ ಮಂತ್ರಿ ಬಂಟ್ವಾಳಕ್ಕೆ ಆಗಮಿಸುವ ಸಂದರ್ಭದಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಮೊಯ್ದಿನ್ ಬಾವ ತಿಳಿಸಿದ್ದಾರೆ.
ವಾಮಮಜೂರು-ಪಿಲಿಕುಳ ರಸ್ತೆಗೆ 490 ಲಕ್ಷ ರೂ ಮಂಜೂರು:- ನಗರದ ವಾಮಂಜೂರು ಜಂಕ್ಷನ್‌ನಿಂದ ಪಿಲಿಕುಳ ನಿಸರ್ಗ ಧಾಮ ಹಾಗೂ ಆಶ್ರಯ ನಗರದ ವರೆಗೆ 1.5 ಕಿ.ಮೀ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 4 ಕೋಟಿ 90ಲಕ್ಷ ರೂ ಸರಕಾರದಿಂದ ಮಂಜೂರು ಮಾಡಲಾಗಿದೆ.ಶೇ 5 ಮಹಾನಗರ ಪಾಲಿಕೆಯ ಅನುದಾನದೊಂದಿಗೆ ಸದರಿ ಕಾಮಗಾರಿಯನ್ನು ಶೀಘ್ರಪ್ರಾರಂಭಿಸಲಾಗುವುದು ಎಂದು ಮೊಯ್ದಿನ್ ಬಾವ ತಿಳಿಸಿದ್ದಾರೆ.
ಮಳಲಿ -ಪೊಳಲಿ ಕಾಲು ಸಂಕ ರಚನೆ ಬಗ್ಗೆ ಕರಾವಳಿ ಪ್ರಾಧಿಕಾರದಿಂದ 70 ಲಕ್ಷ ರೂ ಅನುದಾನ ಮಂಜೂರಾಗಿರುವುದಲ್ಲದೆ. ಸ್ಥಳೀಯ ಶಾಸಕರ ಅನುದಾನದಿಂದ ಶೇ.5 ನ್ನು ಭರಿಸಿ ಸದ್ರಿ ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಮೊಯ್ದಿನ್ ಬಾವ ತಿಳಿಸಿದ್ದಾರೆ.
ಸುರತ್ಕಲ್ ಮಾರುಕಟ್ಟೆ ನಿರ್ಮಾಣಕ್ಕೆ ನಗರಾಭಿವೃದ್ಧಿ ಸಚಿವಾಲಯದ ಮೂಲಕ 50 ಕೋಟಿ ರೂ ಮಂಜೂರಾಗಿದೆ. ಆಡಳಿತಾತ್ಮಕ ಮಂಜೂರಾತಿ ಸಚಿವ ಸಂಪುಟದಿಂದ ದೊರೆತ ಬಳಿಕ ಮುಂದಿನ ಕ್ರಮ ಕೈ ಗೊಳ್ಳಲಾಗುವುದು. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜ್ಯಸರಕಾರದಿಂದ ಶಾಸಕರ ಪ್ರಸ್ತಾವನೆಗಳಿಗೆ ಮುಖ್ಯ ಮಂತ್ರಿಗಳು ಸ್ಪಂದಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕ ಮೊಯ್ದಿನ್ ಬಾವ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಮನಪಾ ಸದಸ್ಯ ಮುಹಮ್ಮದ್ ಕುಂಜತ್ತಬೈಲ್,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮೆಲ್ವಿನ್,ತಾ.ಪಂಚಾಯತ್ ಸದಸ್ಯ ಶ್ರೀಧರ್ ಮೊದಲಾದವರು ಉಪಸ್ಥಿತರಿದ್ದರು.







