ಪ್ರವಾದಿ ಕುರಿತು ಅಶ್ಲೀಲವಾಗಿ ಮಾತನಾಡಿದವರ ಮೇಲೆ ಕ್ರಮಕ್ಕೆ ಆಗ್ರಹ
ಬೆಂಗಳೂರು, ಸೆ. 27: ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಕುರಿತು ಅಶ್ಲೀಲವಾಗಿ ಮಾತನಾಡಿರುವ ಗುಜರಾತ್ ಮೂಲದ ಸೋನು ಡಂಗಾರ್ ಹಾಗೂ ನಿವೃತ್ತ ಸೈನ್ಯಾಧಿಕಾರಿ ಆರ್.ಎಸ್.ಎನ್. ಸಿಂಗ್ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹಜರತ್ ಬಿಲಾಲ್ ಸುನ್ನಿ ಟ್ರಸ್ಟ್ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ಅಲ್‌ಹಾಜ್ ಅಮೀರ್ ಜಾನ್ ಖಾದ್ರಿ, ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ದೇಶದಲ್ಲಿ ಎಲ್ಲರೂ ಸಮಾನವಾಗಿ ಬದುಕುವಂತಹ ಸ್ವಾತಂತ್ರವಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಹಿಂದೂ-ಮುಸ್ಲಿಮರು ಸೌರ್ಹಾದತೆಯಿಂದ ಬದುಕುತ್ತಿದ್ದಾರೆ. ಆದರೆ, ಸಮಾಜದಲ್ಲಿರುವ ಕೆಲವು ಕೋಮುವಾದಿ ಮನಸ್ಥಿತಿಯುಳ್ಳವರಿಂದ ಕೋಮುಸೌರ್ಹಾದತೆ ಕದಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ದಲಿತ, ಅಲ್ಪಸಂಖ್ಯಾತರ ಮೇಲೆ ದಾಳಿ ಆರಂಭವಾಗಿದೆ. ಅಲ್ಲದೆ, ಲವ್ ಜಿಹಾದ್, ಗೋ ಹತ್ಯೆ, ತ್ರಿಬಲ್ ತಲಾಕ್, ರಾಮಮಂದಿರ ನಿರ್ಮಾಣ ಹೀಗೆ ಹಲವು ಹೆಸರುಗಳನ್ನು ಮುಂದಿಟ್ಟುಕೊಂಡು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಲ್ಲೆ ಹಾಗೂ ಅಮಾನುಷ ಮಾರಣಾಂತಿಕ ಕೃತ್ಯಗಳು ನಡೆಯುತ್ತಿವೆ. ಆದರೂ, ಕೇಂದ್ರ ಸರಕಾರ ಸಂಪೂರ್ಣ ಮೌನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವವರನ್ನು ಕೂಡಲೇ ಬಂಧಿಸಬೇಕು. ರೊಹಿಂಗ್ಯ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ಕ್ರಿಯೆ ನಿಲ್ಲಬೇಕು. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಶಾಂತಿ ಸ್ಥಾಪಿಸುವಂತೆ ನಿರ್ಣಯ ಮಂಡಿಸಿ ರೊಹಿಂಗ್ಯ ಮುಸ್ಲಿಂ ಪರ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಟಿಪ್ಪುಸುಲ್ತಾನ್ ಸಂಯುಕ್ತ ರಂಗದ ಸರ್ದಾರ್ ಅಹ್ಮದ್ ಖುರೇಷಿ, ಮುಸ್ಲಿಂ ಬಾರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ವಝೀರ್, ಸುನ್ನತ್ ಜಾಮಿಯಾ ಹಜ್ರತ್ ಬಿಲಾಲ್‌ನ ಮರ್ಕಜೆ ಅಹಲೇ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







