ವರ್ಗಾವಣೆಯ ಬೇಸರದಿಂದಲೇ ರಾಜೀನಾಮೆ: ನ್ಯಾ.ಜಯಂತ್ ಪಟೇಲ್

ಬೆಂಗಳೂರು, ಸೆ.27: ವರ್ಗಾವಣೆಯ ಬೇಸರದಿಂದಲೇ ರಾಜೀನಾಮೆ ನೀಡಿದ್ದು, ಆ ನಿರ್ಧಾರದಿಂದ ಹಿಂದೆ ಸರಿಯಲು ಸಾಧ್ಯವೇ ಇಲ್ಲ ಎಂದು ರಾಜ್ಯ ಹೈಕೋರ್ಟ್‌ನ ನ್ಯಾ.ಜಯಂತ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ವಕೀಲರ ಪರಿಷತ್‌ನ ಉಪಾಧ್ಯಕ್ಷ ವೈ.ಎನ್.ಸದಾಶಿವ ರೆಡ್ಡಿ, ಅಡ್ವೊಕೇಟ್ ಜನರಲ್ ಮಧುಸೂದನ್ ಆರ್. ನಾಯಕ್ ಅವರು ನ್ಯಾ.ಜಯಂತ್ ಪಟೇಲ್ ಅವರನ್ನು ಭೇಟಿಯಾಗಿ, ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದರು. ಅಲ್ಲದೆ, ನಿಮಗೆ ವಕೀಲರ ಸಮುದಾಯದ ಬೆಂಬಲವಿದೆ ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಜಯಂತ್ ಪಟೇಲ್, ನಿರ್ಧಾರ ಬದಲಿಸುವ ಸಮಯ ಮುಗಿದಿದೆ. ರಾಜೀನಾಮೆ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದರು.
ತಮ್ಮನ್ನು ಭೇಟಿಯಾದ ಪತ್ರಕರ್ತರಿಗೂ ವರ್ಗಾವಣೆಯ ಬೇಸರದಿಂದಲೇ ರಾಜೀನಾಮೆ ನೀಡಿದ್ದೇನೆ, ಈ ಬಗ್ಗೆ ಇನ್ನೇನನ್ನೂ ಹೇಳುವುದಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ.
ಈ ಮಧ್ಯೆ ನ್ಯಾ.ಜಯಂತ್ ಪಟೇಲ್ ಅವರ ವರ್ಗಾವಣೆ ಮತ್ತು ರಾಜೀನಾಮೆಗೆ ರಾಜ್ಯ ವಕೀಲರ ಸಮೂಹ ಅಸಮಾಧಾನ ವ್ಯಕ್ತಪಡಿಸಿದೆ. ಇದರ ಜತೆಯಲ್ಲೇ ನ್ಯಾ.ಜಯಂತ್ ಪಟೇಲ್ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿರುವ ಕೊಲಿಜಿಯಂ ಕ್ರಮಕ್ಕೂ ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.





