ಬಿಬಿಸಿಯ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಮಿಥಾಲಿರಾಜ್
.jpg)
ಹೊಸದಿಲ್ಲಿ, ಸೆ.27: ಬಿಬಿಸಿ ಪಟ್ಟಿ ಮಾಡಿರುವ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಭಾರತದ ವನಿತೆಯರ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಸ್ಥಾನ ಗಿಟ್ಟಿಕೊಂಡಿದ್ದಾರೆ.
ಬಿಬಿಸಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮಿಥಾಲಿ ರಾಜ್ 2017ರಲ್ಲಿ ಭಾರತದ ಪ್ರಭಾವಿ ಮಹಿಳೆಯಾಗಿದ್ದಾರೆ.
ದಿಲ್ಲಿಯ ಇರಾ ತ್ರಿವೇದಿ ಮತ್ತು ತುಲಿಕಾ ಕಿರಣ್ , ಬೆಂಗಳೂರಿನ ಅದಿತಿ ಅವಾಸ್ಥಿ ಮತ್ತು ಮೆಹರುನ್ನಿಸಾ ಸಿದ್ದಿಕಿ ಅವರು ಮಿಥಾಲಿ ರಾಜ್ ಜೊತೆಗೆ ಬಿಬಿಸಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಇತರ ಸಾಧಕಿಯರು.
34ರ ಹರೆಯದ ಮಿಥಾಲಿ ರಾಜ್ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ದಾಖಲಿಸಿದ ಮಹಿಳಾ ಆಟಗಾರ್ತಿ. ಇಂಗ್ಲೆಂಡ್‌ನಲ್ಲಿ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ನಾಯಕಿಯಾಗಿ ಮುನ್ನಡೆಸಿದ್ದರು. ಮಿಥಾಲಿ ಏಕದಿನ ಕ್ರಿಕೆಟ್‌ನಲ್ಲಿ 6,000 ರನ್ ಪೂರೈಸಿದ ಮೊದಲ ಆಟಗಾರ್ತಿ. ಸತತ 7 ಅರ್ಧಶತಕಗಳನ್ನು ದಾಖಲಿಸಿದ ಮಹಿಳಾ ಕ್ರಿಕೆಟರ್. ಎರಡು ಬಾರಿ (2005 ಮತ್ತು 2017ರಲ್ಲಿ )ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವನ್ನು ಮುನ್ನಡೆಸಿದ ಮೊದಲ ನಾಯಕಿ. ಅರ್ಜುನ ಪ್ರಶಸ್ತಿ ಪುರಸ್ಕೃತ ಮಿಥಾಲಿ ರಾಜ್ ಅವರು 2015 ದೇಶದ ಅತ್ಯುನ್ನತ ನಾಲ್ಕನೆ ನಾಗರಿಕ ಪುರಸ್ಕಾರ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.







