ಪ್ರತ್ಯೇಕ ಪ್ರಕರಣ: ಮನೆ ಬೀಗ ಮುರಿದು ನಗದು, ಚಿನ್ನಾಭರಣ ಕಳವು
ಬೆಂಗಳೂರು, ಸೆ.27: ನಗರದ ಮೂರು ಕಡೆ ಹಾಡಹಗಲೇ ನಗದು, ಚಿನ್ನಾಭರಣ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬನಶಂಕರಿ 3ನೆ ಹಂತದ ಆವಲಹಳ್ಳಿ ನಿವಾಸಿ ಗುಪ್ತಾ ಎಂಬವರು ಕುಟುಂಬ ಸಮೇತ ಊರಿಗೆ ತೆರಳಿದ್ದರು. ಈ ವೇಳೆ ವರ ಮನೆಯ ಬೀಗ ಒಡೆದು ಒಳನುಗ್ಗಿರುವ ದುಷ್ಕರ್ಮಿಗಳು ಸುಮಾರು 5 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕಳವು ಮಾಡಿದ್ದಾರೆ. ಮಂಗಳವಾರ ರಾತ್ರಿ ಮನೆಗೆ ವಾಪಸ್ ಆದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಮ್ಮನಹಳ್ಳಿಯ ರಾಮಯ್ಯ ಲೇಔಟ್ ನಿವಾಸಿ ವೆಂಕಟೇಶ್ ಎಂಬವರು ಮಂಗಳವಾರ ಹೊರಗೆ ಹೋಗಿದ್ದಾಗ ಕಳ್ಳರು ಇವರ ಮನೆಯ ಬಾಗಿಲು ಮೀಟಿ ಒಳನುಗ್ಗಿ 5 ಸಾವಿರ ನಗದು ಹಾಗೂ 72 ಗ್ರಾಂ ಆಭರಣವನ್ನು ಕಳವು ಮಾಡಿದ್ದಾರೆ. ಮನೆಗೆ ವಾಪಸ್ ಆದಾಗ ಕಳ್ಳತನ ನಡೆದಿರುವುದು ಕಂಡು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.
ಇದೇ ವ್ಯಾಪ್ತಿಯ ಮತ್ತೊಂದು ಮನೆಯಲ್ಲಿ ಕಳ್ಳರು ಕಳ್ಳತನ ಮಾಡಿದ್ದು, 1 ಲಕ್ಷ ರೂ.ನಗದು ಹಾಗೂ 100 ಗ್ರಾಂ ತೂಕದ ಆಭರಣಗಳನ್ನು ಕಳವು ಮಾಡಿದ್ದಾರೆ. ರಾಮಯ್ಯ ಲೇಔಟ್‌ನ ನಿವಾಸಿ ವಿದ್ಯಾ ಜಗನ್ನಾಥ್ ಎಂಬವರು ನಿನ್ನೆ ಬೆಳಗ್ಗೆ 11:30ರಲ್ಲಿ ಹೊರಗೆ ಹೋಗಿದ್ದು, ರಾತ್ರಿ ಮನೆಗೆ ಮರಳುವುದರೊಳಗೆ ಕಳವು ಮಾಡಿರುವುದಾಗಿ ತಿಳಿದು ಬಂದಿದೆ.
ಈ ಸಂಬಂಧ ಪ್ರಕರಣಗಳನ್ನು ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.





