ಗ್ರಾಮೀಣ ಪ್ರವಾಸೋದ್ಯಮಕ್ಕೆ ಬಾಗಿಲು ತೆರೆದ ‘ಮೂಡುಕುದ್ರು’

ಉಡುಪಿ, ಸೆ.27: ಬೀಚ್ ಹಾಗೂ ದೇವಸ್ಥಾನಗಳಿಗೆ ಹೊರತಾಗಿ ಜಿಲ್ಲೆಯಲ್ಲಿ ಪ್ರಾಕೃತಿಕ ಸೌಂದರ್ಯದಿಂದು ತುಂಬಿ ತುಳುಕುತ್ತಿರುವ ಅಪಾರ ಸಂಖ್ಯೆ ಯಲ್ಲಿರುವ ಕುದ್ರುಗಳು, ಗ್ರಾಮೀಣ ಪ್ರದೇಶ ಹಾಗೂ ಜಲಪಾತಗಳನ್ನು ಪ್ರವಾಸಿಗರೆದುರು ತೆರೆದಿಟ್ಟು, ಜಿಲ್ಲೆಯ ಪ್ರವಾಸೋದ್ಯಮವನ್ನು ಸುಸ್ಥಿರ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಉಡುಪಿಯಿಂದ ಸುಮಾರು 10ಕಿ.ಮೀ. ದೂರದಲ್ಲಿರುವ ‘ಮೂಡುಕುದ್ರು’ವಿನಲ್ಲಿ ಇಂದು ಸಂಜೆ ಗ್ರಾಮೀಣ ಪ್ರವಾಸೋದ್ಯಮಕ್ಕೆ ಚಾಲನೆ ನೀಡಿತು.
ಕಾರ್ಯಕ್ರಮದಲ್ಲಿ ಅತಿಥಿಗಳು ಹಾಗೂ ಪ್ರವಾಸಿಗರನ್ನು ಸುಮಾರು ಅರ್ಧಗಂಟೆಯ ದೋಣಿ ಪ್ರಯಾಣದಲ್ಲಿ ಮೂಡುಕುದ್ರುವಿಗೆ ಕರೆದೊಯ್ದು ಅಲ್ಲಿ ಗ್ರಾಮೀಣ ಪ್ರದೇಶದ ಜನರೇ ವ್ಯವಸ್ಥೆಗೊಳಿಸಿದ ಕಾರ್ಯಕ್ರಮದಲ್ಲಿ ಭಾಗೀದಾರರನ್ನಾಗಿ ಮಾಡಲಾಯಿತು.
ಬುಧವಾರ ಸಂಜೆ 5:30 ರಾತ್ರಿ 8 ಗಂಟೆಯವರೆಗೆ ಕುದ್ರುವಿನಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳನ್ನು ಕಲ್ಯಾಣಪುರ ಗ್ರಾಪಂ ಹಾಗೂ ಸ್ಥಳೀಯ ಸ್ವಸಹಾಯ ಗುಂಪಿನ ಮಹಿಳೆಯರೇ ಆಯೋಜಿಸಿದ್ದರು. ಹೊರಗಿನಿಂದ ಬಂದ ಅತಿಥಿಗಳಿಗೆ, ಮಣಿಪಾಲದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ಪರಿಚಯವನ್ನು, ಸ್ಥಳೀಯ ಕಲೆ, ಸಂಸ್ಕೃತಿ, ಖಾದ್ಯಗಳನ್ನು ಬಡಿಸುವ ಮೂಲಕ ಮಾಡಿಕೊಡಲಾಯಿತು.
ಕಾರ್ಯಕ್ರಮವನ್ನು ದೊಂದಿ ಬೆಳಕನ್ನು ಹೊತ್ತಿಸುವ ಮೂಲಕ ಉದ್ಘಾಟಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ಕುದ್ರುಗಳು ಪ್ರಕೃತಿ ಸೌಂದರ್ಯದಿಂದ ತುಂಬಿ ತುಳುಕುತ್ತಿವೆ. ಇಲ್ಲಿನ ಪರಿಸರ, ಬದುಕನ್ನು ಪ್ರವಾಸಿಗರಿಗೆ ಪರಿಚಯಿಸುವ ಮೂಲಕ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲು ಸಾಧ್ಯವಿದೆ. ಇದು ಸ್ಥಳೀಯರ ಆರ್ಥಿಕ ಸಂಪನ್ಮೂಲ ಆಗಲು ಸಾಧ್ಯವಿದೆ. ಈ ಮೂಲಕ ಸಮುದಾಯ ಆಧಾರಿತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸಾಧ್ಯವಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಪ್ರವಾಸಿಗರಿಗೆ ಸ್ಥಳೀಯವಾದ ಹಾಡು, ನೃತ್ಯ, ಯಕ್ಷಗಾನ ಪ್ರದರ್ಶನವನ್ನು ನೀಡಿ ಸ್ಥಳೀಯ ಕಲೆ, ಸಂಸ್ಕೃತಿಯ ಪರಿಚಯ ವನ್ನು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ನೀಡಲಾಯಿತು. ಸ್ವಸಹಾಯ ಗುಂಪಿನ ಮಹಿಳೆಯರು ತಾವು ತಯಾರಿಸುವ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಿದ್ದರು.ಕೊನೆಯಲ್ಲಿ ಸ್ವಸಹಾಯ ಗುಂಪಿನ ಮಹಿಳೆಯರು ವಿಶೇಷವಾಗಿ ತಯಾರಿಸಿದ ವಿಭಿನ್ನ ಖಾದ್ಯಗಳನ್ನು ಬಡಿಸಿದರು.
ಕಾರ್ಯಕ್ರಮದಲ್ಲಿ ಕುಂದಾಪುರದ ಸಹಾಯಕ ಕಮಿಷನರ್ ಶಿಲ್ಪಾ ನಾಗ್, ಸಿಇಓ ಶಿವಾನಂದ ಕಾಪಸಿ, ಕಲ್ಯಾಣಪುರ ಗ್ರಾಪಂ ಅಧ್ಯಕ್ಷೆ ಪುಷ್ಪಾ ಕೋಟ್ಯಾನ್, ಜಿಪಂ ಸದಸ್ಯ ಜನಾರ್ದನ ತೋನ್ಸೆ, ತಾಪಂ ಸದಸ್ಯ ಧನಂಜಯ ಉಪಸ್ಥಿತರಿದ್ದರು. ರಾಘವೇಂದ್ರ ಕರ್ವಾಲೊ ಕಾರ್ಯಕ್ರಮ ನಿರ್ವಹಿಸಿದರು.







