ನಗರದಲ್ಲಿ ಭಿಕ್ಷುಕರ ತೆರವು ಕಾರ್ಯಚರಣೆ

ಉಡುಪಿ, ಸೆ.27: ನಗರದ ವಿವಿಧೆಡೆ ಭಿಕ್ಷಾಟನೆಯಲ್ಲಿ ತೊಡಗಿದ್ದ ಹೊರ ಜಿಲ್ಲೆಯ ಮೂವರು ಭಿಕ್ಷುಕರನ್ನು ಉಡುಪಿ ಪೊಲೀಸರು ಬುಧವಾರ ವಶಕ್ಕೆ ಪಡೆದು, ಬಳಿಕ ಅವರವರ ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದರು.
ನಗರದ ಬಸ್ ನಿಲ್ದಾಣ, ಶ್ರೀಕೃಷ್ಣ ಮಠದ ಪರಿಸರದಲ್ಲಿ ಭಿಕ್ಷುಕರ ಹಾವಳಿ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರು ನೀಡಿದ್ದು, ಅದರಂತೆ ಉಡುಪಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಪದಾಧಿಕಾರಿ ತಾರಾನಾಥ್ ಮೇಸ್ತ ಅವರ ಸಹಕಾರದೊಂದಿಗೆ ಭಿಕ್ಷುಕರ ತೆರವುಗೊಳಿಸುವ ಕಾರ್ಯಚರಣೆಯನ್ನು ನಡೆಸಿದರು.
ಈ ಸಂದರ್ಭ ಹೊರ ಜಿಲ್ಲೆಯ ಮೂವರು ಭಿಕ್ಷುಕರನ್ನು ವಶಕ್ಕೆ ಪಡೆದುಕೊಳ್ಳ ಲಾಯಿತು. ಭಿಕ್ಷಾಟನೆ ನಿಷೇಧ ಹಾಗೂ ಕಾನೂನು ಬಾಹಿರ ಎಂಬುದಾಗಿ ಅವರಿಗೆ ಮನದಟ್ಟು ಮಾಡಿದ ಪೊಲೀಸರು, ಬಳಿಕ ಅವರನ್ನು ಬಸ್‌ನ ಮೂಲಕ ಅವರ ಊರಿಗೆ ಕಳುಹಿಸಿಕೊಟ್ಟರು.
ಜಿಲ್ಲೆಯಲ್ಲಿ ಭಿಕ್ಷುಕರ ಪುರ್ನವಸತಿ ಕೇಂದ್ರ ಇಲ್ಲದೆ, ಭಿಕ್ಷುಕರಿಗೆ ವ್ಯವಸ್ಥಿತ ನೆಲೆ ನೀಡಲು ಅವಕಾಶ ಇಲ್ಲದಾಗಿದೆ. ಜಿಲ್ಲಾಡಳಿತವು ಈ ಸಮಸ್ಯೆಯತ್ತ ಗಮನಹರಿಸಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳ ಕಾಡು, ತಾರಾನಾಥ್ ಮೇಸ್ತ ಒತ್ತಾಯಿಸಿದ್ದಾರೆ.







