ಕೋವೈ ಪೋಸ್ಟ್ ವೆಬ್‌ಸೈಟ್ ಸಂಪಾದಕಿಗೆ ಬೆದರಿಕೆ ಕರೆ
ದೇವಾಲಯದಲ್ಲಿ ಬಾಲಕಿಯರನ್ನು ಅರೆನಗ್ನಗೊಳಿಸಿದ ಸುದ್ದಿ ಪ್ರಕಟ

ಚೆನ್ನೈ, ಸೆ. 26: ಮಧುರೈ ದೇವಾಲಯವೊಂದರಲ್ಲಿ ಬಾಲಕಿಯರು ಅರೆನಗ್ನರಾಗಿ ಅರ್ಚಕರ ಸೇವೆ ಮಾಡುವುದನ್ನು ಬಲವಂತಪಡಿಸುವ ವಿಲಕ್ಷಣ ಆಚರಣೆ ಬಗ್ಗೆ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ತನಗೆ ಬೆದರಿಕೆ ಕರೆ ಬಂದಿದೆ ಎಂದು ಕೊಯಂಬತ್ತೂರ್‌ನ ವೆಬ್‌ಸೈಟ್ ಕೋವೈ ಪೋಸ್ಟ್‌ನ ಸಂಪಾದಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಧುರೈ ಜಿಲ್ಲೆಯ ವೆಲ್ಲೂರು ಗ್ರಾಮದಲ್ಲಿರುವ ದೇವಾಲಯದಲ್ಲಿ ಪ್ರಾಚೀನ ಸಂಪ್ರದಾಯದಂತೆ ಅರ್ಚಕರು 10ರಿಂದ 14 ವರ್ಷ ಒಳಗಿನ 7 ಬಾಲಕಿಯರನ್ನು ಆಯ್ಕೆ ಮಾಡುತ್ತಾರೆ. ಅರ್ಚಕರ ಸೇವೆ ಮಾಡುವುದು ಈ ಬಾಲಕಿಯರ ಕರ್ತವ್ಯ. ಈ ಬಾಲಕಿಯರು ತೆರೆದ ಎದೆಯಲ್ಲಿರಲು ಹಾಗೂ ಕೇವಲ ಆಭರಣ ಹಾಗೂ ಹೂವು ಮಾತ್ರ ಧರಿಸಲು ಅವಕಾಶ ನೀಡಲಾಗುತ್ತದೆ.
ತಮಿಳು ತಿಂಗಳು ಅವನಿಯ ಕೊನೆ ಮಂಗಳವಾರ ಆರಂಭವಾದ ಎರಡು ವಾರಗಳ ಆರಾಧನೆಯಲ್ಲಿ ಪಾಲ್ಗೊಳ್ಳಲು ಅರ್ಚಕರು 7 ಬಾಲಕಿಯರನ್ನು ಆಯ್ಕೆ ಮಾಡುತ್ತಾರೆ. 7 ಬಾಲಕಿಯರನ್ನು ಆಯ್ಕೆ ಮಾಡುವ ಮುನ್ನ ವೆಲ್ಲಾಲೂರ್‌ನ ಯೆಝಿಕಾತ ಅಮ್ಮನ್ ದೇವಾಲಯದಲ್ಲಿ ಅರ್ಚಕರ ಮುಂದೆ 62 ಗ್ರಾಮಗಳ ಬಾಲಕಿಯರ ಪರೇಡ್ ನಡೆಸಲಾಗುತ್ತದೆ. ಇದು ದೇವಾಲಯದ ಸಾಂಪ್ರದಾಯಿಕ ಆಚರಣೆ.
ವೆಬ್‌ಸೈಟ್‌ನಲ್ಲಿ ಸುದ್ದಿ ಹಾಗೂ ವಿಡಿಯೋ ಅಪ್‌ಲೋಡ್ ಮಾಡಿದ ಬಳಿಕ ಸ್ಥಳೀಯಾಡಳಿತ ಕೂಡಲೇ ಸಮಿತಿ ರೂಪಿಸಿ ತನಿಖೆಗೆ ಆದೇಶಿಸಿತ್ತು. ಇದು ಪ್ರಾಚೀನ ಸಂಪ್ರದಾಯ ಎಂಬುದನ್ನು ತನಿಖಾ ಸಮಿತಿ ಕಂಡುಕೊಂಡಿತ್ತು. ತನಿಖೆ ವೇಳೆ ದೇವಾಲಯದಲ್ಲಿ ಯಾವುದೇ ಲೈಂಗಿಕ ಕಿರುಳ ನೀಡಿರುವುದು ಬೆಳಕಿಗೆ ಬಂದಿರಲಿಲ್ಲ. ಆದರೆ, ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ವೆಬ್‌ಸೈಟ್‌ಗೆ ಬೆದರಿಕೆ ಕರೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕೋವೈ ಪೋಸ್ಟ್‌ನ ಪ್ರಧಾನ ಸಂಪಾದಕಿ ವಿದ್ಯಾಶ್ರೀ ಧರ್ಮರಾಜ್ ಕೋಯಂಬತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.







