ಮಾಧ್ಯಮಗಳು ಢೋಂಗಿ ಜಾತ್ಯಾತೀತವಾದಿಗಳ ಮುಖವಾಡ ಕಳಚಬೇಕು: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆ.27: ದೇಶದಲ್ಲಿ ರಾಜಕೀಯ ಬದಲಾವಣೆಗಳು ಕ್ಷಿಪ್ರಗತಿಯಲ್ಲಿ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಢೋಂಗಿ ಜಾತ್ಯಾತೀತವಾದಿಗಳ ಮುಖವಾಡ ಕಳಚಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕರೆ ನೀಡಿದ್ದಾರೆ.
ಬುಧವಾರ ನಗರದ ಶಮ್ಸ್ ಕನ್ವೆನ್ಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡೈಲಿ ಪಾಸ್ಬಾನ್ ಪತ್ರಿಕೆಯ 71ನೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೆಲವರು ಅಧಿಕಾರಕ್ಕಾಗಿ, ಮತಗಳಿಗಾಗಿ ತಮ್ಮನ್ನು ಜಾತ್ಯತೀತವಾದಿಗಳೆಂದು ಕರೆಸಿಕೊಳ್ಳುತ್ತಾರೆ. ಅಧಿಕಾರ ಸಿಕ್ಕ ನಂತರ ಎಷ್ಟರಮಟ್ಟಿಗೆ ಅವರು ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟುಕೊಂಡು, ಬದ್ಧತೆಯನ್ನು ಪ್ರದರ್ಶಿಸಿದರು ಎಂಬುದನ್ನು ಗಮನಿಸಬೇಕು ಎಂದು ನುಡಿದರು.
ಅಧಿಕಾರದ ಮದದಿಂದ ಕೆಲವರು ಈ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುವುದಾಗಿ ಹೇಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಆಗಿರುವ ಫಲಿತಾಂಶ ನಮ್ಮ ಮುಂದಿದೆ. ಆದುದರಿಂದ, ಎಚ್ಚರ ತಪ್ಪದೆ ಮುಂದಿನ ಚುನಾವಣೆಯಲ್ಲಿ ಜಾತ್ಯಾತೀತ ಶಕ್ತಿಯನ್ನು ಬಲಗೊಳಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕು ಎಂದು ಹೇಳಿದರು.
ಮತೀಯವಾದಿ ಶಕ್ತಿಗಳು ಆಕ್ರಮಣಕಾರಿಯಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ಮಾಡುತ್ತಿವೆ. ಅವರನ್ನು ಮಾಧ್ಯಮಗಳು ಗುರುತಿಸಿ ಜನರ ಎದುರು ಬಣ್ಣ ಬಯಲು ಮಾಡದಿದ್ದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ, ಭ್ರಾತೃತ್ವ, ಸಮಾನತೆ ನೆಲೆಸಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಉರ್ದು ಪತ್ರಿಕೆಗಳು ತಮ್ಮ ಸಂಪಾದಕೀಯಗಳಲ್ಲಿ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಬೇಕು. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದಂತೆ ಪತ್ರಿಕಾರಂಗವು ಸದೃಢವಾಗಿದ್ದರೆ ಮಾತ್ರ ಪ್ರಜಾಪ್ರಭುತ್ವ ಶಕ್ತಿಯುತವಾಗಿರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಡೈಲಿ ಪಾಸ್ಬಾನ್ ಪತ್ರಿಕೆಯು 71 ವರ್ಷಗಳನ್ನು ಪೂರೈಸಿ 72ನೆ ವರ್ಷಕ್ಕೆ ಕಾಲಿಡುತ್ತಿದೆ. 1946ರಲ್ಲಿ ಇಸ್ಮಾಯೀಲ್ ತಾಬಿಶ್ ಅವರು ಪಾಸ್ಬಾನ್ ಆರಂಭಿಸಿದರು. ಅಂದಿನಿಂದ ಇವತ್ತಿನವರೆಗೂ ನಿರಂತರವಾಗಿ ಉರ್ದು ಭಾಷೆಗೆ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಡೈಲಿ ಪಾಸ್ಬಾನ್ ಪತ್ರಿಕೆಯ ವೆಬ್ಸೈಟ್‌ಅನ್ನು ಮಾಜಿ ಮುಖ್ಯಮಂತ್ರಿ, ಸಂಸದ ವೀರಪ್ಪಮೊಯ್ಲಿ ಹಾಗೂ ಇ-ಪತ್ರಿಕೆಗೆ ಸಚಿವ ರೋಷನ್ ಬೇಗ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಡಾ.ಕೆ.ರಹ್ಮಾನ್ ಖಾನ್, ಹಿರಿಯ ಪತ್ರಕರ್ತ ಡಾ.ಅಝೀಝ್ ಬರ್ನಿ, ಅಜ್ಮೀರ್ ದರ್ಗಾದ ಸಜ್ಜಾದ ನಶೀನ್ ಹಝ್ರತ್ ದೀವಾನ್ ಸೈಯದ್ ಝೈನುಲ್ ಆಬಿದೀನ್, ಪಾಸ್ಬಾನ್ ಪತ್ರಿಕೆಯ ಸಂಪಾದಕ ಮೊಹಮ್ಮದ್ ಉಬೇದುಲ್ಲಾ ಶರೀಫ್, ಸಚಿವ ಕೆ.ಜೆ.ಜಾರ್ಜ್, ಶಾಸಕ ಝಮೀರ್ ಅಹ್ಮದ್ ಖಾನ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.







