ಪೌರ ಕಾರ್ಮಿಕರಿಗೆ ಬಯೋಮೆಟ್ರಿಕ್ ಅಳವಡಿಕೆ: ಕೆ.ಜೆ.ಜಾರ್ಜ್
ಬೆಂಗಳೂರು, ಸೆ.27: ಬಿಬಿಎಂಪಿ ಪೌರ ಕಾರ್ಮಿಕರ ಕೆಲಸದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಮುಂದಿನ 15 ದಿನದಲ್ಲಿ ಎಲ್ಲ ವಾರ್ಡ್‌ಗಳಲ್ಲೂ ಬಯೋಮೆಟ್ರಿಕ್ ಅಳವಡಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಬಿಬಿಎಂಪಿಯಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿರುವ ಕುಂದುಕೊರತೆಗಳ ಪರಿಹಾರ ಕುರಿತು ಎನ್‌ಜಿಒ ಸದಸ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರೊಡನೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತ್ಯಾಜ್ಯ ವಿಲೇವಾರಿಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಬಯೋಮೆಟ್ರಿಕ್ ಅಳವಡಿಕೆ ಕಡ್ಡಾಯವೆಂದು ತಿಳಿಸಿದರು.
ತ್ಯಾಜ್ಯ ವಿಲೇವಾರಿಯಲ್ಲಿ ಗುತ್ತಿಗೆ ಇಲ್ಲ: ತ್ಯಾಜ್ಯ ವಿಲೇವಾರಿಯ ಸಂಪೂರ್ಣ ಜವಾಬ್ದಾರಿಯನ್ನು ಬಿಬಿಎಂಪಿಯೇ ನಿಭಾಯಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇವಲ ವಾಹನ ಮತ್ತು ಚಾಲಕರನ್ನು ಮಾತ್ರ ಗುತ್ತಿಗೆದಾರರಿಗೆ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಅದರ ಜವಾಬ್ದಾರಿಯನ್ನೂ ಬಿಬಿಎಂಪಿಯೇ ವಹಿಸಿಕೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ವಾಹನಗಳಿಗೆ ಜಿಪಿಎಸ್: ತ್ಯಾಜ್ಯವನ್ನು ವಿಲೇವಾರಿ ಮಾಡುವ ವಾಹನಗಳು ಬಿಬಿಎಂಪಿ ನಿಗದಿ ಪಡಿಸಿದ ಜಾಗಗಳಲ್ಲಿಯೇ ಹಾಕಬೇಕು. ಆದರೆ, ಕೆಲವು ಗುತ್ತಿಗೆದಾರರು ತಮಗೆ ಬೇಕಾದ ಕಡೆಗೆ ಕಸವನ್ನು ಸುರಿಯುತ್ತಿದ್ದಾರೆ. ಹೀಗಾಗಿ ಕಸ ವಿಲೇವಾರಿ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ಪ್ರತಿ ವಾಹನದ ಚಲನವಲನಗಳನ್ನು ಗಮನಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ಲಾಸ್ಟಿಕ್‌ಗೆ ಭತ್ಯೆ: ಬೆಂಗಳೂರು ನಗರದಲ್ಲಿ ಪ್ಲಾಸ್ಟಿಕ್ ಸಮಸ್ಯೆ ಮಿತಿಮೀರಿದೆ. ಹೀಗಾಗಿ ಪ್ಲಾಸ್ಟಿಕನ್ನು ಎಲ್ಲೆಂದರಲ್ಲಿ ಬಿಸಾಡದೆ ಸಂಗ್ರಹಿಸಿ ಒಣ ತ್ಯಾಜ್ಯ ಘಟಕಗಳಿಗೆ ಕೊಟ್ಟರೆ ಭತ್ತೆ ರೂಪದಲ್ಲಿ ಹಣ ನೀಡವಂತಹ ವಿಶೇಷ ಕಾರ್ಯಕ್ರಮಗಳನ್ನು ಜಾರಿ ಮಾಡಲು ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ದಂಡ ಹೆಚ್ಚಳ: ಜನತೆ ಹಾಗೂ ಗುತ್ತಿಗೆದಾರರು ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಯುವ ನಿಟ್ಟಿನಲ್ಲಿ ದಂಡ ಹಾಕುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎನ್‌ಜಿಒ ಸಂಸ್ಥೆಗಳು ಒತ್ತಾಯಿಸಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ದಂಡ ಹಾಗೂ ದಂಡದ ಪ್ರಮಾಣವನ್ನು ಹೆಚ್ಚಳ ಮಾಡುವ ಕುರಿತು ಬಿಬಿಎಂಪಿ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.







