ಸೌಭಾಗ್ಯ ಯೋಜನೆಯಡಿ ಬಡವರಿಗೆ ಪುಕ್ಕಟೆ ವಿದ್ಯುತ್ ಇಲ್ಲ: ಸರಕಾರ

ಹೊಸದಿಲ್ಲಿ,ಸೆ.27: ಎಲ್ಲರಿಗೂ ವಿದ್ಯುತ್ ಸಂಪರ್ಕವನ್ನು ನೀಡುವ ಉದ್ದೇಶದೊಂದಿಗೆ ಇತ್ತೀಚಿಗೆ ಘೋಷಿಸಲಾಗಿರುವ ಸೌಭಾಗ್ಯ ಯೋಜನೆಯಡಿ ಯಾವುದೇ ವರ್ಗದ ಬಳಕೆದಾರರಿಗೆ ಉಚಿತವಾಗಿ ವಿದ್ಯುತ್ ಒದಗಿಸಲಾಗುವುದಿಲ್ಲ ಎಂದು ಸರಕಾರವು ಬುಧವಾರ ಸ್ಪಷ್ಟಪಡಿಸಿದೆ.
ಆದರೆ ಯೋಜನೆಯಡಿ ಬಡ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವನ್ನು ಉಚಿತವಾಗಿ ಒದಗಿಸಲಾಗುವುದು ಎಂದು ವಿದ್ಯುತ್ ಸಚಿವಾಲಯವು ಬಿಡುಗಡೆಗೊಳಿ ಸಿರುವ,ಯೋಜನೆಯ ಮಾಹಿತಿಗಳನ್ನೊಂಡ ದಾಖಲೆಯಲ್ಲಿ ತಿಳಿಸಲಾಗಿದೆ.
ಇತರ ಕುಟುಂಬಗಳು ವಿದ್ಯುತ್ ಸಂಪರ್ಕಕ್ಕೆ 500 ರೂ.ಗಳನ್ನು ಪಾವತಿಸಬೇಕಾಗುತ್ತದೆ ಮತ್ತು ಇದಕ್ಕೆ 10 ಸಮಾನ ಕಂತುಗಳ ಸೌಲಭ್ಯವಿದೆ. ವಿದ್ಯುತ್ ಪೂರೈಕೆ ಕಂಪನಿಗಳು ವಿದ್ಯುತ್ ಬಿಲ್‌ಗಳ ಜೊತೆಗೆ ಈ ಕಂತುಗಳನ್ನು ವಸೂಲು ಮಾಡುತ್ತವೆ ಎಂದು ಅದು ವಿವರಿಸಿದೆ.
2018,ಡಿಸೆಂಬರ್‌ನೊಳಗೆ ವಿದ್ಯುತ್ ಸೌಲಭ್ಯದಿಂದ ವಂಚಿತ ಎಲ್ಲ ನಾಲ್ಕು ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕಗಳನ್ನು ಒದಗಿಸುವ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಸಹಜ ಬಿಜಲಿ ಹರ್ ಘರ್ ಯೋಜನೆ(ಸೌಭಾಗ್ಯ)ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚಾಲನೆ ನೀಡಿದ್ದರು.
ನಾಲ್ಕು ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕಗಳನ್ನು ನೀಡುವುದರಿಂದ ವಾರ್ಷಿಕ ವಿದ್ಯುತ್ ಅಗತ್ಯವು 28,000 ಮೆಗಾವ್ಯಾಟ್ ಅಥವಾ 80,000 ಮಿಲಿಯನ್ ಯೂನಿಟ್ ಗಳಿಂದ ಹೆಚ್ಚಳಗೊಳ್ಳಲಿದೆ. ಪ್ರತಿ ಯೂನಿಟ್‌ಗೆ ಸರಾಸರಿ ಮೂರು ರೂ.ಗಳಂತೆ ವಿದ್ಯುತ್ ಪೂರೈಕೆ ಕಂಪನಿಗಳು ಅಥವಾ ಡಿಸ್ಕಾಂಗಳಿಗೆ ವಾರ್ಷಿಕ 24,000 ಕೋ.ರೂ.ಗಳ ಹೆಚ್ಚುವರಿ ಆದಾಯ ಲಭಿಸಲಿದೆ ಎಂದು ದಾಖಲೆಯು ಹೇಳಿದೆ.







