ಪುರೋಹಿತ ಶಾಹಿ, ಮನು ಧರ್ಮ ಪ್ರಣೀತ ಬುದ್ಧಿ ದೇಶವನ್ನು ಆಳುತ್ತಿವೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಮೈಸೂರು,ಸೆ.27: ಪುರೋಹಿತ ಶಾಹಿ ಹಾಗೂ ಮನುಧರ್ಮ ಪ್ರಣೀತ ಬುದ್ಧಿ ದೇಶವನ್ನು ಆಳುತ್ತಿವೆ. ಆದಿಕವಿ ಪಂಪ ಕೂಡ ವೈದಿಕ ಶಾಹಿಯ ವಿರೋಧವನ್ನು ಎದುರಿಸಿದ್ದ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಆಯೋಜಿಸಿದ್ದ ನಾಲ್ಕು ದಿನಗಳ ಕವಿಗೋಷ್ಠಿಯ ಕೊನೆಯ ದಿನವಾದ ಬುಧವಾರ ನಡೆದ ವಿಖ್ಯಾತ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಚ್ಛಿದ್ರಕಾರಿ ಶಕ್ತಿಗಳನ್ನು ದೂರೀಕರಿಸಿ ಮಾನವೀಯತೆಯ ಭಾವವೇ ಕಾವ್ಯ. ಕನ್ನಡ ಪರಂಪರೆಗೆ ಪಂಪ ಹೊಸ ಕಾವ್ಯ ಮೀಮಾಂಸೆ ಬರೆದ. ಆತ ಸರಸ್ವತಿಯನ್ನು ಪುರೋಹಿತ ಶಾಹಿಗೆ ವಿರುದ್ಧವಾಗಿ ಜಿನೇಂದ್ರವಾಣಿಯಾಗಿ ಪ್ರತಿಪಾದಿಸುತ್ತಾನೆ. ತೀರ್ಥಂಕರನ ಸ್ತ್ರೀ ರೂಪ ಅದು ಎನ್ನುತ್ತಾನೆ. ಅಭಿವ್ಯಕ್ತಿ ಕ್ರಿಯೆಯನ್ನು ಕಟ್ಟುವ ಕವಿಗಳಿಗೆ ಸಾವಿಲ್ಲ. ಅಂತಹವರ ಕವಿತೆಗಳು ಸುಳ್ಳು ಹೇಳುವುದಿಲ್ಲ. ಕವಿ ತನ್ನ ಪರಂಪರೆಯನ್ನು ಅಕ್ಷರ ಲೋಕಕ್ಕೆ ತೆರೆದಿಡಬೇಕು. ಬಹುತ್ವದ ಭಾರತವನ್ನು ಕಟ್ಟುವ ಕ್ರಿಯೆಯಲ್ಲಿ ಮುಂದಾಗಬೇಕು ಎಂದು ತಿಳಿಸಿದರು.
ಅಮೆರಿಕ ಮತ್ತು ಉತ್ತರ ಕೊರಿಯ ನಡುವೆ ನಿರ್ಮಾಣವಾಗಿರುವ ಯುದ್ಧ ಸನ್ನಿವೇಶದಿಂದ ಜಗತ್ತು ಆತಂಕ, ಭಯದಿಂದ ತಲ್ಲಣಗೊಂಡಿದೆ. ಅವರ ಕೈಲಿರುವುದು ಆಟಿಕೆಗಳಲ್ಲ ವಿಶ್ವವನ್ನೇ ವಿನಾಶ ಮಾಡಬಲ್ಲ ಶಕ್ತಿಯ ಅಣ್ವಸ್ತ್ರಗಳು. ಅವರ ಸಮಸ್ಯೆ ಇಂದು, ನೆನ್ನೆಯದಲ್ಲ. ಜಾಗತಿಕ ಚರಿತ್ರೆಯ ವಿದ್ವೇಷ ಅದು. ಅದನ್ನು ತಡೆಯುವ ಅಗತ್ಯವಿದೆ ಎಂದರು.
ಗೋವಾದಲ್ಲಿ 55 ಕನ್ನಡಿಗರ ಕುಟುಂಬಗಳ ಮನೆಗಳನ್ನು ನೆಲಸಮ ಮಾಡಲಾಗಿದೆ. ಅವರ ರಕ್ಷಣೆಗೆ ಧಾವಿಸಬೇಕಾಗಿರುವುದು ರಾಜ್ಯ ಸರ್ಕಾರದ ಹೊಣೆಯಲ್ಲ. ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರ ಕಿವಿ ಹಿಂಡಬೇಕಾಗಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.
ಆರಂಭದಲ್ಲಿ ಬುದ್ಧನಾದ ಸಿದ್ದಾರ್ಥ ಕವನ ವಾಚಿಸಿದ ಕವಿ ಡಾ.ವಿ.ಮುನಿವೆಂಕಟಪ್ಪ ಅವರು, ಆರ್ಯರ ಆಗಮನದಿಂದ ಸಾಮಾಜಿಕ, ಧಾರ್ಮಿಕ, ಆರ್ಥಿಕತೆ ತತ್ತರಿಸಿತ್ತು ಎಂದು ಹೇಳುವ ಮೂಲಕ ಪುರೋಹಿತ ಶಾಹಿ ವಿರುದ್ಧ ವಾಗ್ದಾಳಿ ಆರಂಭಿಸಿದರು. ಕೆಲ ಕವಿತೆಗಳೂ ಕೂಡ ಅದನ್ನೇ ಬಿಂಬಿಸಿದವು.
ಕವಿ ಡಾ.ಬಂಜಗೆರೆ ಜಯಪ್ರಕಾಶ್ ಅವರು, ತೊಳೆಯಬೇಕಾದದ್ದು ದೇವಾಲಯ ಮಾತ್ರವಲ್ಲ ಶೌಚಾಲಯ ಕೂಡ, ಶೌಚವೆಂಬುದು ಸೂತ್ರ, ಸತ್ಯವೆಂಬುದು ಶಾಸ್ತ್ರ ಜೀವ ಎಂಬುದು ಪವಿತ್ರ ಸಹಜೀವ ಇನ್ನೂ ಪವಿತ್ರ ಎಂದು ವಾಕ್ ಸ್ವಾತಂತ್ರ್ಯದ ಮೇಲಿನ ಹಲ್ಲೆಯನ್ನು ಖಂಡಿಸಿದರೆ, ಸಿ.ಎಂ.ಚನ್ನಬಸಪ್ಪ ಅವರು, ಪಂಚಾಂಗ ಪದ್ಧತಿ ಅಳಿಸಿ ಹಾಕೋಣ, ರಾಜ್ಯಾಂಗ ನೀತಿಯ ಪಾಲಿಸೋಣ ಎಂದರು.
ಆಲೂರು ದೊಡ್ಡನಿಂಗಪ್ಪ ಅವರು, ಬಂಗಾರದ ಬೆವರು ಕವಿತೆಯ ಮೂಲಕ ಜೀತದ ಬದಲಾದ ಆಯಾಮದ ಯಾತನೆಯನ್ನು ಬಿಡಿಸಿಟ್ಟರು.
ಸಾಕು ಸಾಕು ಜೀತ: ಸಂಜಯ ಜಿ.ಕುರಣೆ ಅವರು, ಅಜ್ಜನ ಜೀತ ಅಂದು, ಅಪ್ಪನ ಜೀತ ಇಂದು, ಸಾಗದಿರಲಿ ಮುಂದು ಸಾಕು ಸಾಕು ಜೀತ ಎಂದು ಇಳಿದನಿಯಲ್ಲೇ ಅಬ್ಬರಿಸಿದರು. ಹೇಮಲತಾ ಮೂರ್ತಿ ಅವರು 40 ದಾಟಿದರೂ ಅವಿವಾಹಿತೆಯಾದ ಹೆಣ್ಣಿನ ಅಳಲನ್ನು ಶ್ರೋತೃಗಳ ಮುಂದಿಟ್ಟರು.
ಜಯಶ್ರೀ ಇಡ್ಕಿದು ಅವರ ತಮ್ಮ 'ಕತ್ತಲು ಬೆಳಕು' ಕಾವ್ಯದಲ್ಲಿ, ಕರಿಯ ಬೂಟಿನಡಿ ಬಿಳಿಯ ಹೂವು, ಬೆತ್ತಲಾದ ನ್ಯಾಯ, ಅರಾಜಕತೆ ಹಾವು, ಜಾತಿ ಹೆಸರ ಹೇಳಿ ಮೂರು ಬಿಟ್ಟವರು, ಜಾತಿ ಹೆಸರ ಹೇಳಿ ಸ್ವಾರ್ಥ ನೆಟ್ಟವರು ಎಂದು ಶೋಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯನ್ನು ಕಟುವಾಗಿ ಟೀಕಿಸಿದರು.
'ಬಾ ಗೌರಿ ಚಂಡಿಕೆಯೆ' ಶೀರ್ಷಿಕೆಯ ಕವನ ವಾಚಿಸಿದ ಕವಿತಾ ರೈ ಅವರು, ನಿನ್ನ ಮಾತುಗಳಿಗೆ ಕಿವಿಯಾದವರೆಲ್ಲ ಒಪ್ಪಿದ್ದರು, ಸ್ವಾತಂತ್ರ್ಯದ ಅಭಿವ್ಯಕ್ತಿಗೆ ರಕ್ಷಣೆ ಇದೆ, ಬಲವಿದೆ ಭಾರತಕ್ಕೆ ಸಂವಿಧಾನ ಒಂದೇ ಭಗವದ್ಗೀತೆ ಎನ್ನುವ ಮೂಲಕ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ವಿರುದ್ಧ ಕಿಡಿಕಾರಿದರು.
ಇದಕ್ಕೂ ಮೊದಲು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ವಿಖ್ಯಾತ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ವಿಶೇಷ ಆಹ್ವಾನಿತರಾಗಿದ್ದ ಕವಿ, ಚಲನಚಿತ್ರ ಗೀತ ರಚನಕಾರ ಡಾ.ಜಯಂತ ಕಾಯ್ಕಿಣಿ ಮಾತನಾಡಿದರು.
ದಸರಾ ಕವಿಗೋಷ್ಠಿ ಉಪಸಮಿತಿ ಅಧ್ಯಕ್ಷೆ ಡಾ.ರತ್ನೆ ಅರಸ್, ಉಪಾಧ್ಯಕ್ಷ ಪಿ.ಪ್ರಸನ್ನ, ಉಪ ವಿಶೇಷಾಧಿಕಾರಿ ಡಾ.ಬಿ.ಕೆ.ಎಸ್.ವರ್ಧನ್, ಕಾರ್ಯಾಧ್ಯಕ್ಷೆ ಡಾ.ಎನ್.ಕೆ.ಲೋಲಾಕ್ಷಿ, ಕಾರ್ಯದರ್ಶಿ ಬಿ.ಮಂಜುನಾಥ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.







