ಮ್ಯಾನುವೆಲ್ ಸ್ಕ್ಯಾವೆಂಜರ್ ಪಟ್ಟಿ ಪರೀಷ್ಕರಣೆಗೆ ಒತ್ತಾಯಿಸಿ ಧರಣಿ

ತುಮಕೂರು, ಸೆ.27: ಮ್ಯಾನುವೆಲ್ ಸ್ಕ್ಯಾವೆಂಜರ್ ಗಣತಿ ವೇಳೆ ಕೈಬಿಟ್ಟಿರುವ ಕುಟುಂಬಗಳ ಮರು ಸೇರ್ಪಡೆಗೊಳಿಸಿ, ಪಟ್ಟಿ ಪರಿಷ್ಕರಿಸುವುದು, ಅನೈರ್ಮಲ್ಯ ವಿರುವ ಶೌಚಾಲಯ ನಾಶ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಸದಸ್ಯರು ಹಾಗೂ ಪೌರಕಾರ್ಮಿಕರು ಧರಣಿ ನಡೆಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಿದರು.
ಮ್ಯಾನುವೆಲ್ ಸ್ಕ್ಯಾವೆಂಜರ್ ತಡೆ ಮೇಲುಸ್ತುವಾರಿ ಸಮಿತಿ ಸದಸ್ಯ ಕೆ.ಬಿ.ಓಬಳೇಶ್ , ಸಫಾಯಿ ಕರ್ಮಚಾರಿ ಕಾವಲು ಸಮಿತಿ ಜಿಲ್ಲಾ ಸಂಚಾಲಕ ಎಸ್.ಎಚ್.ಚಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕದರಪ್ಪ ಅವರ ನೇತೃತ್ವದಲ್ಲಿ ಆರಂಭವಾದ ಧರಣಿಯಲ್ಲಿ ಮೊದಲಿಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು, ನಂತರ ಜಿಲ್ಲಾ ಪಂಚಾಯತ್ ಕಚೇರಿಯವರೆಗೆ ಮೆರವಣಿಗೆ ನಡೆಸಿ ಸಿಇಒ ಕೆ.ಜಿ.ಶಾಂತರಾಮ್ ಅವರಿಗೆ ಮನವಿ ಸಲ್ಲಿಸಿದರು.
ಎಸ್ ಇಸಿಸಿ ಸಮೀಕ್ಷೆ ನಡೆಸುವಾಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತ್ತು ಕಣ್ಣತಪ್ಪಿನಿಂದ ಕೈಬಿಟ್ಟಿರುವ ಬರಿಗೈಯಲ್ಲಿ ಮಲ ಸ್ವಚ್ಛಗೊಳಿಸುವ ಕೆಲ ವ್ಯಕ್ತಿಗಳ ಹೆಸರನ್ನು ಕೈಬಿಡಲಾಗಿದೆ. ಕೂಡಲೇ ಅವರುಗಳ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಅಲ್ಲದೆ, ಈಗಾಗಲೇ ಪಾವಗಡ ತಾಲೂಕಿನಲ್ಲಿ ಕೆಲವರು ಸ್ವಯಂ ಘೋಷಣೆ ಮಾಡಿಕೊಂಡಿದ್ದು, ಅವರನ್ನು ತಕ್ಷಣವೇ ಪಟ್ಟಿಗೆ ಸೇರಿಸಿಕೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಗುಬ್ಬಿ ತಾಲೂಕು ಕಲ್ಲೂರು ಗ್ರಾಮದ ಪರಿಶಿಷ್ಟ ಜಾತಿಯವರಿಂದ ಮಲದ ಗುಂಡಿ ಸ್ವಚ್ಛಗೊಳಿಸಿ ಕಾಯ್ದು ಉಲ್ಲಂಘಿಸಿರುವ ಬಳೆ ರಂಗನಾಥ್ ಅವರನ್ನು ಕೂಡಲೇ ಬಂಧಿಸಬೇಕು. ಕಲ್ಲೂರು ಗ್ರಾಮಪಂಚಾಯತ್ ಪಿಡಿಒ ಮತ್ತು ಕಾರ್ಯದರ್ಶಿಯ ವಿರುದ್ಧ ಕೇಸು ದಾಖಲಿಸುವಂತೆಯೂ ಮನವಿಯಲ್ಲಿ ಒತ್ತಾಯಿಸಿ ದ್ದಾರೆ.
ಧರಣಿಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಪೌರಕಾರ್ಮಿಕರು ಭಾಗವಹಿಸಿದ್ದರು.







