ಜಿಎಸ್‌ಟಿ ಬಗ್ಗೆ ವಾಟ್ಸ್ ಆ್ಯಪ್ ಜೋಕ್ ಹಂಚಿಕೊಂಡ ಹರ್ಭಜನ್

ಹೊಸದಿಲ್ಲಿ, ಸೆ.28: ಸ್ಟಾರ್ ಕ್ರಿಕೆಟಿಗ ಹರ್ಭಜನ್ ಸಿಂಗ್ ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿದ್ದ ಜನಪ್ರಿಯ ಜೋಕನ್ನು ತನ್ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಈ ಜೋಕ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹರ್ಭಜನ್ ಶೇರ್ ಮಾಡಿರುವ ಜೋಕ್ ಕೇಂದ್ರಸರಕಾರದ ಬಹುಚರ್ಚಿತ ಜಿಎಸ್‌ಟಿಗೆ ಸಂಬಂಧಿಸಿದ್ದಾಗಿದೆ.
‘‘ರೆಸ್ಟೊರೆಂಟ್‌ನಲ್ಲಿ ಡಿನ್ನರ್ ಮಾಡಿದ ಬಳಿಕ ಬಿಲ್ ಪಾವತಿ ಮಾಡುವ ವೇಳೆ ನಮ್ಮೊಂದಿಗೆ ರಾಜ್ಯಸರಕಾರ ಹಾಗೂ ಕೇಂದ್ರಸರಕಾರ ಕೂಡ ಡಿನ್ನರ್ ಮಾಡಿದ್ದಾವೋ ಎಂಬ ಭಾವನೆ ಉಂಟಾಗುತ್ತದೆ’’ ಎಂದು ಟೀಟ್ ಮಾಡಿದ್ದಾರೆ.
ಕೇಂದ್ರ ಸರಕಾರ ಜುಲೈನಲ್ಲಿ ಸರಕು ಹಾಗೂ ಸೇವಾ ತೆರಿಗೆ(ಜಿಎಸ್‌ಟಿ)ಯನ್ನು ಜುಲೈನಲ್ಲಿ ಜಾರಿಗೆ ತಂದಿದ್ದು, ರೆಸ್ಟೊರೆಂಟ್ ಬಿಲ್‌ಗಳಲ್ಲಿ ಕೇಂದ್ರ ಹಾಗೂ ರಾಜ್ಯಸರಕಾರದ ಜಿಎಸ್‌ಟಿಯನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವ್ಯಕ್ತಿಯೊಬ್ಬ,‘‘ ಇದು ನಿಜ... ನನಗೆ ಕೂಡ ಹೀಗೆಯೇ ಎನಿಸುತ್ತದೆ....ಎರಡು ಪ್ರತ್ಯೇಕ ಜಿಎಸ್‌ಟಿ ಏಕಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅರುಣ್ ಜೇಟ್ಲಿ ಜೀ ಈ ಬಗ್ಗೆ ನೀವು ನನಗೆ ವಿವರಣೆ ನೀಡಿ’’ ಎಂದು ಕೇಳಿಕೊಂಡಿದ್ದಾರೆ.
ಕನಿಷ್ಠ ಪಕ್ಷ ನೀವಾದರೂ ಈ ಬಗ್ಗೆ ಧ್ವನಿ ಎತ್ತುವ ಧೈರ್ಯ ಮಾಡಿದ್ದೀರಿ. ಓರ್ವ ಯಶಸ್ವಿ ಕ್ರಿಕೆಟಿಗನಿಗೆ ಈ ರೀತಿ ಯೋಚನೆ ಬಂದರೆ ಜನ ಸಾಮಾನ್ಯರ ಪರಿಸ್ಥಿತಿ ಹೇಗಿರಬೇಡ ಯೋಚಿಸಿ? ಎಂದು ಜಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ.







