ಹಿರಿಯ ಸಿನ್ಹಾ ಟೀಕೆಯನ್ನು ತಿರಸ್ಕರಿಸಿದ ಕಿರಿಯ ಸಿನ್ಹಾ

ಹೊಸದಿಲ್ಲಿ,ಸೆ.28: ಎನ್‌ಡಿಎ ಸರಕಾರದ ಆರ್ಥಿಕ ನೀತಿಗಳ ಕುರಿತು ತನ್ನ ತಂದೆ ಹಾಗೂ ಹಿರಿಯ ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರು ಮಾಡಿರುವ ಟೀಕೆಯನ್ನು ಗುರುವಾರ ತಿರಸ್ಕರಿಸಿರುವ ಸಹಾಯಕ ನಾಗರಿಕ ವಾಯುಯಾನ ಸಚಿವ ಜಯಂತ ಸಿನ್ಹಾ, ಅವರ ಟೀಕೆಗಳು ವಾಸ್ತವಾಂಶಗಳನ್ನು ಪರಿಗಣಿಸದ ಅಪೂರ್ಣ ಹೇಳಿಕೆಗಳಾಗಿವೆ ಎಂದು ಹೇಳಿದ್ದಾರೆ.
ಅವರು ಯಶವಂತ ಸಿನ್ಹಾರ ಹೆಸರನ್ನು ಪ್ರಸ್ತಾಪಿಸಲಿಲ್ಲವಾದರೂ, ಸರಕಾರವನ್ನು ಟೀಕಿಸಿರುವ ಹಲವಾರು ಲೇಖನಗಳು ಅದು ಕೈಗೊಂಡಿರುವ ಮೂಲಭೂತ ರಚನಾತ್ಮಕ ಸುಧಾರಣೆಗಳನ್ನೇ ಮರೆತುಬಿಟ್ಟಿವೆ ಎಂದರು.
ನವ ಭಾರತದಲ್ಲಿ ದೀರ್ಘಾವಧಿಯ ಪ್ರಗತಿಗೆ ಮತ್ತು ಉದ್ಯೋಗ ಸೃಷ್ಟಿಗೆ ಬಲವನ್ನು ತುಂಬುವ ಸದೃಢವಾದ ಹೊಸ ಆರ್ಥಿಕತೆಯನ್ನು ನಾವು ಸೃಷ್ಟಿಸುತ್ತಿದ್ದೇವೆ ಎಂದು ವೃತ್ತಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿರುವ ತನ್ನ ಲೇಖನದಲ್ಲಿ ಜಯಂತ ಹೇಳಿದ್ದಾರೆ.
ಕೇವಲ ಒಂದು ಅಥವಾ ಎರಡು ತ್ರೈಮಾಸಿಕಗಳ ಜಿಡಿಪಿ ಪ್ರಗತಿ ದರ ಮತ್ತು ಇತರ ದತ್ತಾಂಶಗಳಿಂದ ಚಾಲ್ತಿಯಲ್ಲಿರುವ ರಚನಾತ್ಮಕ ಸುಧಾರಣೆಗಳ ದೀರ್ಘಾವಧಿ ಪರಿಣಾಮ ಗಳ ಮೌಲ್ಯಮಾಪನ ಸಾಧ್ಯವಿಲ್ಲ ಎಂದರು.
ನೋಟು ಅಮಾನ್ಯ, ಜಿಎಸ್‌ಟಿ ಜಾರಿ ಮತ್ತು ಡಿಜಿಟಲ್ ಪಾವತಿಗಳು ದೇಶದ ಚಿತ್ರಣವನ್ನೇ ಬದಲಿಸುವ ಪ್ರಯತ್ನಗಳಾಗಿವೆ ಎಂದು ಅವರು ಹೇಳಿದರು.
ಬುಧವಾರ ಆಂಗ್ಲ ದೈನಿವೊಂದರಲ್ಲಿ ಪ್ರಕಟಗೊಂಡಿದ್ದ ಲೇಖನವೊಂದರಲ್ಲಿ ದೇಶದ ಇಂದಿನ ಆರ್ಥಿಕತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಯಶವಂತ ಸಿನ್ಹಾ ಅವರು ನರೇಂದ್ರ ಮೋದಿ ಸರಕಾರ ಮತ್ತು ವಿತ್ತಸಚಿವ ಅರುಣ್ ಜೇಟ್ಲಿ ಅವರ ಕಾರ್ಯಶೈಲಿಯನ್ನು ಕಟುವಾಗಿ ಟೀಕಿಸಿದ್ದರು. ನೋಟು ಅಮಾನ್ಯ, ಜಿಎಸ್‌ಟಿ ಜಾರಿ ಕುರಿತಂತೆಯೂ ಅವರು ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿದ್ದರು.







