ಪ್ರತಿರೋಧದ ಧ್ವನಿಯನ್ನು ಹತ್ಕಿಕ್ಕಲು ಬಿಡೆವು: ಕವಿತಾ ಕೃಷ್ಣನ್
‘ಸ್ವಾತಂತ್ರ್ಯ ಮತ್ತು ಬಾಂಧವ್ಯದೆಡೆಗೆ ನಡಿಗೆ’ ಕಾರ್ಯಕ್ರಮ

ಮಂಗಳೂರು, ಸೆ. 28: ದೇಶದಲ್ಲಿ ನಮ್ಮನ್ನು ಆಳುವವರನ್ನು ಪ್ರಶ್ನಿಸುವವರನ್ನು, ಪ್ರತಿರೋಧಿಸುವವರನ್ನು ಬೆದರಿಸುವ, ಕೊಲ್ಲುವ ಹಂತಕ್ಕೆ ಫ್ಯಾಸಿಸ್ಟ್ ಶಕ್ತಿ ಮುಂದುವರಿದಿದ್ದು, ನಮ್ಮ ಪ್ರತಿರೋಧದ ಧ್ವನಿಯನ್ನು ನಾವೆಂದೂ ಹತ್ತಿಕ್ಕಲು ಬಿಡೆವು ಎಂದು ಸಾಮಾಜಿಕ ಹೋರಾಟಗಾರ್ತಿ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಕಾರ್ಯದರ್ಶಿ (ಎಐಪಿಡಬ್ಲುಎ) ಕವಿತಾ ಕೃಷ್ಣನ್ ಹೇಳಿದ್ದಾರೆ.
ಅವರು ಇಂದು ನಗರದ ನೆಹರೂ ಮೈದಾನದಲ್ಲಿ ನಗರದ ವಿವಿಧ ವಿದ್ಯಾರ್ಥಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಆಯೋಜಿಸಲಾದ ‘ಸ್ವಾತಂತ್ರ್ಯ ಮತ್ತು ಬಾಂಧವ್ಯದೆಡೆಗೆ ನಡಿಗೆ’ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಪ್ರೊ. ಕಲಬುರ್ಗಿ ಹತ್ಯೆ ಮಾಡಿದವರು ಇನ್ನೂ ಬಂಧನವಾಗಿಲ್ಲ. ಕೆಲವರನ್ನು ಬಂಧಿಸಿದರೂ ಅವರನ್ನು ಜಾಮೀನು ನೀಡಿ ಬಿಡುಗಡೆಗೊಳಿಸಲಾಗಿದೆ. ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ ಪನ್ಸಾರೆ ಹತ್ಯಾಕೋರರಿಗೆ ಶಿಕ್ಷೆಯಾಗಿಲ್ಲ. ಅದರ ಪರಿಣಾಮವಾಗಿಯೇ ಇನ್ನೊಂದು ಪ್ರಬಲ ಪ್ರತಿರೋಧದ ಧ್ವನಿಯನ್ನು ವೌನವಾಗಿಸಲಾಯಿತು. ಆದರೆ ಯಾವುದೇ ಬುಲೆಟ್‌ಗಳಿಂದ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿರೋಧದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಆದರೆ ಅವರು ಏನು ಮಾಡಲು ಪ್ರಯತ್ನಿಸುತ್ತಿದ್ದಾರೆಂಬುದನ್ನು ನಾವೆಲ್ಲಾ ಅರಿಯಬೇಕಾಗಿದೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಹತ್ಯೆ ಮಾಡಿರುವುದು ಯಾರೆಂಬುದು ನಮಗಾರಿಗೂ ತಿಳಿದಿಲ್ಲ. ಆದರೆ, ಅವರ ಹತ್ಯೆಯನ್ನು ಸಂಭ್ರಮಿಸುತ್ತಿರುವವರು ಯಾರು, ಸಾಮಾಜಿಕ ಜಾಲತಾಣಗಳ ಮೂಲಕ ಯಾರಿಂದ ಬೆದರಿಕೆಗಳು ಬರುತ್ತಿವೆ. ಇದನ್ನೆಲ್ಲಾ ಮಾಡುತ್ತಿರುವರು ಯಾರು ಎಂಬುದು ಎಲ್ಲರಿಗೂ ಇಂದು ಸ್ಪಷ್ಟ. ಒಟ್ಟಿನಲ್ಲಿ ಪ್ರಶ್ನಿಸುವವರನ್ನು, ಧ್ವನಿ ಎತ್ತುವವರನ್ನು ಭಯಗೊಳಿಸುವ ಪ್ರಯತ್ನ ನಡೆಸುತ್ತಿದ್ದು, ಅದಕ್ಕೆ ನಾವು ಆಸ್ಪದ ನೀಡವುದಿಲ್ಲ ಎಂದು ಹೇಳಿದರು.
ಗೌರಿ ಲಂಕೇಶ್‌ರವರ ಹತ್ಯೆಯ ಬಳಿಕವೂ ಅವರ ಚಾರಿತ್ರ್ಯ ಹರಣದ ಮೂಲಕ ಅವರ ತೇಜೋವಧೆಗೆ ಪ್ರಯತ್ನಿಸಲಾಯಿತು. ಬಿಜೆಪಿ ಮತ್ತು ಆರೆಸ್ಸೆಸ್‌ನ್ನು ಪ್ರಶ್ನಿಸುವ, ಧ್ವನಿ ಎತ್ತುವ ಯಾವುದೇ ಮಹಿಳೆಯ ವಿರುದ್ಧ ಇಂತಹ ಆಪಾದನೆಗಳನ್ನು ಹೊರಿಸುವ ಮೂಲಕ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಬನಾರಸ್ ಹಿಂದೂ ಯುನಿವರ್ಸಿಟಿ ವುಮೆನ್‌ನ ವಿದ್ಯಾರ್ಥಿನಿಯರು ತಮ್ಮ ಹಾಸ್ಟೆಲ್‌ನ ಗುಣಮಟ್ಟ ಹಾಗೂ ಕ್ಯಾಂಪಸ್‌ನಲ್ಲಿನ ಸುರಕ್ಷತೆಯ ಬೇಡಿಕೆಯನ್ನಿರಿಸಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಅವರಿಗೆ ರಾಷ್ಟ್ರ ದ್ರೋಹಿಗಳೆಂಬ ಪಟ್ಟ ನೀಡಿ, ಲಾಠಿ ಚಾರ್ಜ್ ನಡೆಸಲಾಯಿತು. ಇಂತಹಕ್ಕೆ ಯುವ ವಿದ್ಯಾರ್ಥಿಗಳು ಅವಕಾಶ ನೀಡಬಾರದು ಎಂದು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.
ಅಂತಾರಾಷ್ಟ್ರೀಯವಾಗಿ ಇಂಧನ ಬೆಲೆ ಕಡಿಮೆಯಾಗಿದ್ದರೂ ದೇಶದಲ್ಲಿ ಹೆಚ್ಚಾಗಿದೆ. ಉದ್ಯೋಗಗಳು ಹಿಂದೆಂದಿಗಿಂತಲೂ ಕಡಿಮೆಯಾಗಿವೆ. ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿಯು ದೇಶದ ಆರ್ಥಿಕತೆಯ ಮೇಲೆ ತೀವ್ರ ತೆರನಾದ ಹೊಡೆತ ನೀಡಿದೆ. ಜನಸಾಮಾನ್ಯರು ಕಂಗಾಲಾಗಿದ್ದಾರೆ. ಆದರೆ ಸರಕಾರ ಮಾತ್ರ ಜನರನ್ನು ವಿಭಜಿಸಿ ಆಡಳಿತ ನಡೆಸುವ ಯತ್ನ ನಡೆಸುತ್ತಿದೆ. ಇದಕ್ಕಾಗಿಯೇ ಹಿಂದೂ ಹಾಗೂ ಮುಸ್ಲಿಮರ ನಡುವಿನ ಸಮಸ್ಯೆಯನ್ನು ಮುಂದಿಟ್ಟು, ಕೆಲವು ಕಡೆ ಮುಸ್ಲಿಮರು, ಕೆಲವು ಕಡೆ ಕ್ರೈಸ್ತರು, ಕೆಲವು ಕಡೆ ಆದಿವಾಸಿಗಳು ಮೊದಲಾದವರನ್ನು ಗುರಿ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲಾ ಗೌರಿ, ದಾಬೋಲ್ಕರ್, ಪನ್ಸಾರೆ, ಕಲಬುರ್ಗಿಯವರ ಸ್ಥಾನವನ್ನು ತುಂಬಬೇಕಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ನಾವೆಲ್ಲಾ ಒಂದಾದಾಗ ಬುಲೆಟ್‌ಗಳಿಂದ ಬೆದರಿಸುವ ಧೈರ್ಯ ಯಾರಿಗೂ ಇರುವುದಿಲ್ಲ ಎಂದು ಕವಿತಾ ಕೃಷ್ಣನ್ ನುಡಿದರು.
ನಿಮ್ಮನ್ನು ಮೌನವಾಗಿಸುವ, ನಿಮ್ಮನ್ನು ಭಯಕ್ಕೆ ಗುರಿಪಡಿಸುವ ಪ್ರಯತ್ನವನ್ನು ಈ ಫ್ಯಾಸಿಸ್ಟ್ ಶಕ್ತಿ ಮಾಡುತ್ತದೆ. ಆದರೆ ಅದಕ್ಕೆಲ್ಲಾ ಹೆದರಬೇಕಾಗಿಲ್ಲ. ಮಹಿಳೆಯರನ್ನು, ಅಲ್ಪಸಂಖ್ಯಾತರನ್ನು ಒಳ್ಳೆಯವರು ಹಾಗೂ ಕೆಟ್ಟವರೆಂದು ಹಾಗೂ ದೇಶದ ನಾಗರಿಕರನ್ನು ತಮ್ಮ ಚಿಂತನೆಗಳಿಗೆ ಸಮಾನವಾಗಿ ದೇಶ ಭಕ್ತರು ಮತ್ತು ದೇಶದ್ರೋಹಿಗಳು ಎಂಬುದಾಗಿ ವಿಭಜಿಸುವುದನ್ನು ನಾವು ವಿರೋಧಿಸಬೇಕಿದೆ. ಸಾವಿರಾರು ಜನರ ನಡುವೆಯೂ ಒಬ್ಬ ವ್ಯಕ್ತಿಯ ಧ್ವನಿ, ಚಿಂತನೆ ಇತರರಿಗಿಂತ ಭಿನ್ನವಾಗಿದ್ದರೂ, ಆತ ಧ್ವನಿ ಎತ್ತುವ ಅವಕಾಶ ಪ್ರಜಾಪ್ರಭುತ್ವದಲ್ಲಿ ದೊರೆಯಬೇಕು. ಅದಕ್ಕಾಗಿ ನಮ್ಮ ಧ್ವನಿ ಮುಂದವರಿಯಬೇಕು ಎಂದು ಅವರು ಕರೆ ನೀಡಿದರು.
ದೇಶಂದ ಸಂವಿಧಾನ ಅಪಾಯದಲ್ಲಿದೆ: ಡಾ. ವಾಸು
ಪ್ರತಿಭಟನಾ ಸಭೆಯಲ್ಲಿ ಇನ್ನೋರ್ವ ಮುಖ್ಯ ಭಾಷಣಕಾರರಾಗಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ರ ಒಡನಾಡಿಯಾಗಿದ್ದ ಡಾ.ಎಚ್.ವಿ. ವಾಸು ಮಾತನಾಡಿ, ಇಂದು ನಮ್ಮ ದೇಶದ ಸ್ವಾತಂತ್ರ ಚಳವಳಿ ಹಾಗೂ ದೇಶದ ಸಂವಿಧಾನದ ಆಶಯ, ದೇಶದ ಭಾತೃತ್ವದ ಪರಿಕಲ್ಪನೆ ಸಂವಿಧಾನ ವಿರೋಧಿ ಜನರಿಂದ ಅಪಾಯಕ್ಕೆ ಸಿಲುಕಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ಸ್ವಾತಂತ್ರ ಬಂದ ಬಳಿಕ ಉದ್ಯೋಗ, ಸಬ್ಸಿಡಿ ನೀಡಿ ಎಂಬ ಬೇಡಿಕೆಯನ್ನಿಟ್ಟು ಕೆಲ ದಶಕಗಳ ಕಾಲ ಹೋರಾಟ ನಡೆಯಿತು. ಬಳಿಕ ಕಳೆದ ಎರಡು ದಶಕಗಳಿಂದೀಚೆಗೆ ನಮ್ಮ ಭೂಮಿ ಕಿತ್ತುಕೊಳ್ಳಬೇಡಿ ಎಂಬ ಹೋರಾಟ ನಡೆದರೆ, ಇದೀಗ ಪ್ರಜಾತಂತ್ರ ಉಳಿಸಲು ಧ್ವನಿ ಎತ್ತುವವರನ್ನು ಕೊಲ್ಲಬೇಡಿ ಎಂಬ ಹೋರಾಟ ನಡೆಸುವ ವ್ಯವಸ್ಥೆಗೆ ನಮ್ಮ ಪ್ರಜಾಪ್ರಭುತ್ವ ತಲುಪಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.
ಧರ್ಮ ವಿರೋಧಿಗಳಿಂದ ಧರ್ಮದ ಹೆಸರಿನಲ್ಲಿ ಗೌರಿ ಲಂಕೇಶ್ ಕೊಲೆ
ಗೌರಿ ಲಂಕೇಶ್‌ರ ಸಾರ್ವಜನಿಕ ಜೀವನದುದ್ದಕ್ಕೂ ನಾನು ಅವರ ಒಡನಾಡಿಯಾಗಿದ್ದವನು. ಅವರನ್ನು ಒಂದು ಧರ್ಮದ ವಿರೋಧಿ ಎಂದು ಬಣ್ಣಿಸಲಾ ಗುತ್ತಿದೆ. ಒಂದು ಧರ್ಮ ನಿಜಕ್ಕೂ ಏನು ಹೇಳಬೇಕು ಎಂಬುದನ್ನು ಅಂಶಗಳನ್ನು ತಿಳಿಸುವ ಮಾನವೀಯತೆಯ ಪ್ರತೀಕವಾಗಿದ್ದ ಗೌರಿಯವರನ್ನು ಧರ್ಮ ವಿರೋಧಿಯಾಗಿರುವ ಜನರೇ ಧರ್ಮದ ಹೆಸರಿನಲ್ಲಿ ಕೊಂದಿದ್ದಾರೆ ಮತ್ತು ಅದನ್ನು ಖಂಡಿಸಬೇಕಾಗಿದೆ. ಆ ಮೂಲಕ ದೇಶವನ್ನು ಕಟ್ಟಬೇಕಾಗಿದೆ ಎಂದು ಕಾರ್ಯಕ್ರಮದ ಇನ್ನೋರ್ವ ಮುಖ್ಯ ಭಾಷಣಕಾರ ಗೌರಿ ಲಂಕೇಶ್‌ರ ಆತ್ಮೀಯರಾಗಿದ್ದ ಡಾ. ಎಚ್.ವಿ. ವಾಸು ಹೇಳಿದರು.
ಬಾಯಿಗೆ ಕಪ್ಪು ಪಟ್ಟಿ ಧರಿಸಿ ನಡಿಗೆ
‘ಸ್ವಾತಂತ್ರ ಮತ್ತು ಬಾಂಧವ್ಯದೆಡೆಗೆ ನಡಿಗೆ’ ಎಂಬ ಸಾಂಕೇತಿಕ ಪ್ರತಿಭಟನೆಯ ಅಂಗವಾಗಿ ಸಾವಿರಾರು ವಿದ್ಯಾರ್ಥಿಗಳು, ಸಮಾನ ಮನಸ್ಕ ಸಂಘಟನೆ ಗಳ ಪ್ರತಿನಿಧಿಗಳು ನಗರದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಬಾಯಿಗೆ ಕಪ್ಪು ಪಟ್ಟಿ ಧರಿಸಿ ಮೆರವಣಿಗೆ ನಡೆಸಿದರು. ಬಳಿಕ ನೆಹರೂ ಮೈದಾನದ ಪ್ರತಿಭಟನಾ ಸಭೆಯಲ್ಲಿ ಸ್ವಾತಂತ್ರ್ಯ ನಮ್ಮ ಹಕ್ಕು (ನಮ್ಮಯ ಹಕ್ಕು ಆಝಾದಿ)’ ಎಂಬ ಘೋಷಣೆಗಳನ್ನು ಕೂಗಲಾಯಿತು.
ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಮಾತನಾಡಿದ ವಿದ್ಯಾರ್ಥಿನಿಯೊಬ್ಬರು, ನಮ್ಮ ಜೀವನ, ನಮ್ಮ ಧ್ವನಿ ಮತ್ತು ನಮ್ಮ ಸ್ವಾತಂತ್ರ್ಯ ನಮ್ಮ ಹಕ್ಕು ಎಂದು ಹೇಳಿದರು. ಪ್ರತಿಭಟನಾ ಸಭೆಯ ಬಳಿಕ ನಮ್ಮ ಧ್ವನಿ ಮೌನವಾಗಿಲ್ಲ ಎಂಬುದರ ಸಂಕೇತವಾಗಿ ಆಕಾಶದೀಪಗಳನ್ನು ಹಾರಿಬಿಡಲಾಯಿತು. ನಾದಾ ಮಣಿನಾಲ್ಕೂರು ಹಾಗೂ ತಂಡ ಕ್ರಾಂತಿ ಗೀತೆಯನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿನಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.







